ಮುಂಬೈ: ಡಿಸೆಂಬರ್ 9 ರಂದು ವಿಮಾನಯಾನ ಕಾರ್ಯಾಚರಣೆಗಳು ಮತ್ತೆ ಮೊದಲಿನಂತೆ ಆಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೀಟರ್ ಎಲ್ಬರ್ಸ್ ಹೇಳಿದ್ದರೂ, ಇಂಡಿಗೋ ಬುಧವಾರ 60ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ.
ಇಂಡಿಗೋ ಬುಧವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ 35 ಮತ್ತು ನಿರ್ಗಮಿಸುವ 26 ಸೇರಿದಂತೆ ಒಟ್ಟು 61 ವಿಮಾನಗಳನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ, ಕೇಂದ್ರ ಸರ್ಕಾರವು ಇಂಡಿಗೋದ ಚಳಿಗಾಲದ ವಿಮಾನ ವೇಳಾಪಟ್ಟಿಯಲ್ಲಿ ಶೇ 10ರಷ್ಟು ಅಥವಾ ದಿನಕ್ಕೆ ಅನುಮೋದಿಸಲಾದ ಸುಮಾರು 2,200 ವಿಮಾನಗಳಲ್ಲಿ ಸುಮಾರು 220 ವಿಮಾನಗಳನ್ನು ಕಡಿತಗೊಳಿಸಿದ ನಂತರ, ಹೇಳಿಕೆ ಬಿಡುಗಡೆ ಮಾಡಿದ್ದ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೀಟರ್ ಆಲ್ಬರ್ಸ್, 'ಇಂಡಿಗೋ ಮತ್ತೆ ತನ್ನ ಕಾರ್ಯಾಚರಣೆ ಆರಂಭಿಸಿದೆ ಮತ್ತು ನಮ್ಮ ಕಾರ್ಯಾಚರಣೆಗಳು ಸ್ಥಿರವಾಗಿವೆ' ಎಂದಿದ್ದರು.
'ಲಕ್ಷಾಂತರ ಗ್ರಾಹಕರು ಈಗಾಗಲೇ ತಮ್ಮ ಪೂರ್ಣ ರೀಫಂಡ್ ಅನ್ನು ಪಡೆದಿದ್ದಾರೆ. ನಮ್ಮ ಇಡೀ ಇಂಡಿಗೋ ತಂಡವು ತುಂಬಾ ಶ್ರಮಿಸುತ್ತಿದೆ. ವಿಮಾನ ರದ್ದಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಪ್ರಯಾಣಿಕರನ್ನು ನೋಡಿಕೊಂಡಿದೆ. ಲಗೇಜ್ ಅನ್ನು ಸರಿಯಾದ ಮಾಲೀಕರಿಗೆ ಹಸ್ತಾಂತರಿಸಲಾಗಿದೆ' ಎಂದು ಅವರು ಹೇಳಿದ್ದರು.
ನಾಗರಿಕ ವಿಮಾನಯಾನ ಸಚಿವಾಲಯದ ಪ್ರಯಾಣಿಕರ ಚಾರ್ಟರ್ ಪ್ರಕಾರ, ಕೆಲವು ಸಂದರ್ಭಗಳಲ್ಲಿ ವಿಮಾನ ವಿಳಂಬ ಅಥವಾ ರದ್ದತಿಗೆ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಪರಿಹಾರವನ್ನು ಪಾವತಿಸಲು ಬಾಧ್ಯವಾಗಿರುತ್ತವೆ. ಅಲ್ಲದೆ, ಪ್ರಯಾಣಿಕರು ವಿನಂತಿಸದೆಯೇ ವಿಮಾನಯಾನ ಸಂಸ್ಥೆಗಳು ಈ ಪರಿಹಾರವನ್ನು ಸ್ವಯಂಚಾಲಿತವಾಗಿ ಒದಗಿಸಬೇಕು.
ಬಿಗಿಯಾದ ಸುರಕ್ಷತಾ ನಿಯಮಗಳನ್ನು ಪಾಲಿಸಲು ವಿಫಲವಾದ ಕಾರಣ, ದೇಶಾದ್ಯಂತ ಇಂಡಿಗೋ ಸಾವಿರಾರು ವಿಮಾನಗಳನ್ನು ರದ್ದುಗೊಳಿಸಿದೆ. ಹಠಾತ್ತನೇ ಉಂಟಾದ ಈ ಅಡಚಣೆಯಿಂದಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಗಳನ್ನುಂಟುಮಾಡಿತು, ಇತರ ದೇಶೀಯ ವಿಮಾನಯಾನ ಸಂಸ್ಥೆಗಳ ವಿಮಾನ ದರಗಳು ಹೆಚ್ಚಾಯಿತು ಮತ್ತು ಭಾರತದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಿತು. .
ಡಿಸೆಂಬರ್ 1 ರಿಂದ ಪ್ರಾರಂಭವಾದ ಪರಿಸ್ಥಿತಿ ಡಿಸೆಂಬರ್ 5 ರವರೆಗೆ ಮುಂದುವರಿದ ನಂತರ, ಸರ್ಕಾರವು ಅಂತಿಮವಾಗಿ ಮಧ್ಯಪ್ರವೇಶಿಸಿತು. ಡಿಜಿಸಿಎ ಎಲ್ಬರ್ಸ್ ಮತ್ತು ರಾಹುಲ್ ಭಾಟಿಯಾ ನಿಯಂತ್ರಿತ ವಿಮಾನಯಾನ ಸಂಸ್ಥೆಯ ಅಕೌಂಟೆಬಲ್ ಮ್ಯಾನೇಜರ್ ಆಗಿರುವ ಇಂಡಿಗೊ ಮುಖ್ಯ ಕಾರ್ಯಾಚರಣಾ ಅಧಿಕಾರಿ ಇಸಿಡ್ರೊ ಪ್ರೊಕ್ವೆರಾಸ್ ಅವರಿಗೆ ಶೋ-ಕಾಸ್ ನೋಟಿಸ್ ನೀಡಿತು ಮತ್ತು ವಿಮಾನ ದರಗಳಿಗೆ ಮಿತಿ ವಿಧಿಸಲು ಆದೇಶಿಸಿತು.