ತಿರುವನಂತಪುರಂ: ಕಾಂಗ್ರೆಸ್ ನಾಯಕ ಮತ್ತು ತಿರುವನಂತಪುರಂ ಶಶಿ ತರೂರ್ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತವಾದಿ ವಿಡಿ ಸಾವರ್ಕರ್ ಅವರ ಹೆಸರಿನ ಪ್ರಶಸ್ತಿಯನ್ನು ನೀಡುವುದಾಗಿ ಎನ್‌ಜಿಒ ಘೋಷಿಸಿದ ನಂತರ ತರೂರ್ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತರೂರ್ ಅವರು ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಅಥವಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಅವರ ಕಚೇರಿ ಸ್ಪಷ್ಟಪಡಿಸಿದೆ. ಈ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ, ನಮ್ಮ ಒಪ್ಪಿಗೆಯಿಲ್ಲದೆ ಈ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದೆ
ಸಂಸದ ಶಶಿ ತರೂರ್ ಸೇರಿದಂತೆ ಪಕ್ಷದ ಯಾವ ಸದಸ್ಯರು ವೀರ ಸಾವರ್ಕರ್ ಅವರ ಹೆಸರಿನಲ್ಲಿ ನೀಡುವ ಯಾವುದೇ ಪ್ರಶಸ್ತಿಯನ್ನು ಸ್ವೀಕರಿಸಬಾರದು ಎಂದು ಕಾಂಗ್ರೆಸ್ ಮುಖಂಡ ಕೆ. ಮುರಳೀಧರನ್ ಬುಧವಾರ ಹೇಳಿದ್ದಾರೆ. ಬ್ರಿಟಿಷರ ಮುಂದೆ ತಲೆಬಾಗಿದವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಸ್ವೀಕರಿಸುವುದು ಸರಿಯಲ್ಲ ಎಂದಿದ್ದಾರೆ.
ತರೂರ್ ಅವರು ಸಾವರ್ಕರ್ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ ಎಂದು ನಾನು ನಂಬುವುದಿಲ್ಲ. ಅವರು ಪ್ರಶಸ್ತಿ ಸ್ವೀಕರಿಸಿದರೆ ಅದರಿಂದ ಕಾಂಗ್ರೆಸ್ ಮುಜುಗರ ಅನುಭವಿಸುತ್ತದೆ ಎಂದು ಹೇಳಿದ್ದಾರೆ.
ಎಚ್‌ಆರ್‌ಡಿಎಸ್ ಇಂಡಿಯಾ, 2025ರ ವೀರ್ ಸಾವರ್ಕರ್ ಅಂತರರಾಷ್ಟ್ರೀಯ ಇಂಪ್ಯಾಕ್ಟ್ ಪ್ರಶಸ್ತಿಗೆ ಶಶಿ ತರೂರ್ ಅವರನ್ನು ಆಯ್ಕೆ ಮಾಡಿತ್ತು. ಇಂದು(ಬುಧವಾರ) ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎನ್ನಲಾಗಿತ್ತು.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿ ತರೂರ್, ‘ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗುತ್ತಿಲ್ಲ ಎಂದಿದ್ದಾರೆ. ಮಾಧ್ಯಮಗಳ ಮೂಲಕ ನನಗೆ ಈ ವಿಷಯ ತಿಳಿದಿದೆ. ಆ ಪ್ರಶಸ್ತಿಯನ್ನು ಕೊಡುತ್ತಿರುವವರು ಯಾರು ಎಂದು ನನಗೆ ಗೊತ್ತಿಲ್ಲ. ಪ್ರಶಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವೂ ತಿಳಿದಿಲ್ಲ. ಅಲ್ಲದೇ ಆ ವೇಳೆ ನಾನು ಇಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ.
ಬುಧವಾರ ಸಂಜೆ ನವದೆಹಲಿಯ NDMC ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.