ಲಖನೌ: ಏಕನಾ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಟಿ20 ಕ್ರಿಕೆಟ್ ಪಂದ್ಯವು ದಟ್ಟ ಮಂಜು ಹಿನ್ನೆಲೆಯಲ್ಲಿ ರದ್ದಾಗಿದ್ದು, ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಮತ್ತು ಖಾಸಗಿ ಅಪ್ಲಿಕೇಶನ್‌ಗಳಲ್ಲಿನ ಗಾಳಿಯ ಗುಣಮಟ್ಟದ ಅಂಕಿಅಂಶಗಳನ್ನು ಅವಲಂಬಿಸದಂತೆ ಸಾರ್ವಜನಿಕರಿಗೆ ಉತ್ತರಪ್ರದೇಶ ಸರ್ಕಾರ ಎಚ್ಚರಿಕೆ ನೀಡಿದೆ.
ಬುಧವಾರದ ಲಖನೌ ನಗರದ ಅಧಿಕೃತ ವಾಯು ಗುಣಮಟ್ಟ ಸೂಚ್ಯಂಕ (AQI) 174 ಆಗಿದ್ದು, ಅದು ‘ಮಧ್ಯಮ’ ವರ್ಗಕ್ಕೆ ಸೇರಿದೆ ಎಂದು ತಿಳಿಸಿದೆ.
ವಾಯು ಗುಣಮಟ್ಟ ಸೂಚ್ಯಂಕದ ಬಗ್ಗೆ ಸಾಮಾಜಿಕ ಜಾಲತಾಣಗಳು ಮತ್ತು ಖಾಸಗಿ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ನೀಡುತ್ತಿರುವ ತಪ್ಪಾಗಿದ್ದು, ಮಾನದಂಡವಲ್ಲದ ಮಾಹಿತಿಯನ್ನು ಹೊಂದಿವೆ. ಹೀಗಾಗಿ ಸಾಮಾಜಿಕ ಜಾಲತಾಣಗಳು ಮತ್ತು ಖಾಸಗಿ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿನವಾಯು ಗುಣಮಟ್ಟದ ಅಂಕಿಅಂಶಗಳನ್ನು ಸಾರ್ವಜನಿಕರು ಅವಲಂಬಿಸಬಾರದು ಎಂದು ಎಚ್ಚರಿಕೆ ನೀಡಿದೆ.
ಕೆಲವು ಖಾಸಗಿ ಅಪ್ಲಿಕೇಶನ್‌ಗಳು ಸ್ಥಳೀಯ (ಹೈಪರ್-ಲೋಕಲ್) ಅಳೆಯುವಿಕೆ ಸಾಧನಗಳು ಮತ್ತು ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ (US EPA)ಯಂತಹ ವಿದೇಶಿ ಮಾನದಂಡಗಳನ್ನು ಬಳಸುತ್ತಿರುವುದರಿಂದ ಗೊಂದಲ ಉಂಟಾಗುತ್ತಿದೆ. ಇವುಗಳು ಭಾರತದ ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕ (NAQI) ವ್ಯವಸ್ಥೆಯಿಂದ ಬಹಳ ಭಿನ್ನವಾಗಿವೆ.
ಭಾರತದಲ್ಲಿ ವಾಯು ಗುಣಮಟ್ಟದ ಮೌಲ್ಯಮಾಪನವನ್ನು NAQI ವ್ಯವಸ್ಥೆಯಡಿ ಮಾಡಲಾಗುತ್ತದೆ. ಇದು ದೇಶದ ಹವಾಮಾನ ಮತ್ತು ಪರಿಸರ ಪರಿಸ್ಥಿತಿಗಳಿಗೆ ಹೊಂದುವ ಮಾನದಂಡಗಳು ಮತ್ತು ಮಿತಿಗಳನ್ನು ಅನುಸರಿಸುತ್ತದೆ.
ಲಖನೌನ ಲಾಲ್ಬಾಗ್, ಟಾಕಟೋರಾ ಮತ್ತು ಅಲಿಗಂಜ್ ಪ್ರದೇಶಗಳಲ್ಲಿರುವ ಅಧಿಕೃತ ಮೇಲ್ವಿಚಾರಣಾ ಕೇಂದ್ರಗಳಲ್ಲಿ ಪ್ರಮಾಣೀಕೃತ ಮತ್ತು ಕ್ಯಾಲಿಬ್ರೇಟ್ ಮಾಡಿದ ಉಪಕರಣಗಳನ್ನು ಬಳಸಲಾಗುತ್ತಿದೆ. ಅನೇಕ ಖಾಸಗಿ ವೇದಿಕೆಗಳು ಉಪಗ್ರಹ ಆಧಾರಿತ ಡೇಟಾ ಅಥವಾ ಮಾಪನಾಂಕ ನಿರ್ಣಯಿಸದ ಸಂವೇದಕಗಳನ್ನು ಅವಲಂಬಿಸಿವೆ, ಹೀಗಾಗಿ ಮೌಲ್ಯಮಾಪನದಲ್ಲಿ ದೋಷಗಳು ಕಂಡು ಬರುತ್ತವೆ. ಹೀಗಾಗಿ ಇವುಗಳ ಮಾಹಿತಿಗಳ ಮೇಲೆ ಜನರು ಅವಲಂಬಿತವಾಗಬಾರದು ಎಂದು ಹೇಳಿದೆ.
ಏಕನಾ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ 7 ಗಂಟೆಗೆ ಪಂದ್ಯ ಆರಂಭವಾಗಬೇಕಿತ್ತು. ಆದರೆ ದಟ್ಟ ಮಂಜು ಕವಿದ ಕಾರಣ ಚೆಂಡಿನ ಚಲನೆಯನ್ನು ಗುರುತಿಸುವುದು ಕಷ್ಟವಾಗುವ ಹಿನ್ನೆಲೆಯಲ್ಲಿ ಟಾಸ್ ಕೂಡ ಮಾಡಲಿಲ್ಲ. ರಾತ್ರಿ 10 ಗಂಟೆಯವರೆಗೂ ಅಂಪೈರ್‌ಗಳು ಹಲವು ಬಾರಿ ವಾತಾವರಣದ ಪರಿಶೀಲನೆ ನಡೆಸಿದರು. ನಂತರ ಪಂದ್ಯ ರದ್ದುಗೊಳಿಸಿದರು.
ಐದು ಪಂದ್ಯಗಳ ಸರಣಿಯಲ್ಲಿ ಭಾರತವು 2–1ರಿಂದ ಮುಂದಿದೆ. ಇನ್ನೊಂದು ಪಂದ್ಯ ಬಾಕಿ ಇದೆ. ಈ ನಡುವೆ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಸೇರಿದ್ದ ಜನರು ನಿರಾಶೆಯಿಂದ ವಾಪಸ್ಸಾಗಿದ್ದಾರೆ.