ಕೊಚ್ಚಿ: ಜೆಡ್ಡಾದಿಂದ ಕೋಝಿಕ್ಕೋಡ್‌ಗೆ 160 ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಗುರುವಾರ ಕೊಚ್ಚಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಈ ವೇಳೆ ಎರಡೂ ಟೈರ್ ಗಳು ಸ್ಫೋಟಗೊಂಡಿವೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಳಾಗಿಲ್ಲ. ಹೀಗಾಗಿ ಮತ್ತೊಂದು ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಜೆಡ್ಡಾದಿಂದ ಕೋಝಿಕ್ಕೋಡ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX 398, ಲ್ಯಾಂಡಿಂಗ್ ಗೇರ್ ಮತ್ತು ಟೈರ್ ವೈಫಲ್ಯದ ಸಮಸ್ಯೆಗಳಿಂದಾಗಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(CIAL) ಪ್ರಕಟಣೆಯಲ್ಲಿ ತಿಳಿಸಿದೆ.
ಬಲಭಾಗದ ಮುಖ್ಯ ಲ್ಯಾಂಡಿಂಗ್ ಗೇರ್ ಮತ್ತು ಟೈರ್ ವೈಫಲ್ಯಕ್ಕೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಯಿಂದಾಗಿ ಏರ್ ಇಂಡಿಯಾ ವಿಮಾನವನ್ನು ತುರ್ತು ಭೂಸ್ಪರ್ಶಕ್ಕಾಗಿ ಕೊಚ್ಚಿಗೆ ಡೈವರ್ಟ್ ಮಾಡಲಾಯಿತು.
ಸಂಪೂರ್ಣ ತುರ್ತು ಪರಿಸ್ಥಿತಿಯಲ್ಲಿ ಇಂದು ಬೆಳಗ್ಗೆ 09.07 ಕ್ಕೆ ವಿಮಾನ ಸುರಕ್ಷಿತವಾಗಿ ಇಳಿಯಿತು ಎಂದು ಪ್ರಕಟಣೆ ತಿಳಿಸಿದೆ.
"ಎಲ್ಲಾ ತುರ್ತು ಸೇವೆಗಳನ್ನು ಮುಂಚಿತವಾಗಿ ಸಕ್ರಿಯಗೊಳಿಸಲಾಯಿತು ಮತ್ತು ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ. ಲ್ಯಾಂಡಿಂಗ್ ನಂತರದ ಪರಿಶೀಲನೆಯಲ್ಲಿ ಬಲಭಾಗದ ಎರಡೂ ಟೈರ್‌ಗಳು ಸಿಡಿದಿರುವುದು ದೃಢಪಟ್ಟಿದೆ" ಎಂದು CIAL ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.