ನವದೆಹಲಿ: ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಶುಕ್ರವಾರ ಬೆಳಗ್ಗೆ ದಟ್ಟವಾದ ಮಂಜು ಆವರಿಸಿದ್ದು, ಶೂನ್ಯ ಗೋಚರತೆ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ(ಐಎಂಡಿ) ರಾಷ್ಟ್ರ ರಾಜಧಾನಿ ದೆಹಲಿಗೆ ರೆಡ್ ಅಲರ್ಟ್ ಘೋಷಿಸಿದ್ದು, ರಸ್ತೆ, ರೈಲು ಮತ್ತು ವಾಯು ಸಂಚಾರಕ್ಕೆ ಪ್ರಮುಖ ಅಡಚಣೆಯಾಗುವ ಬಗ್ಗೆ ಎಚ್ಚರಿಕೆ ನೀಡಿದೆ.
ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಈಶಾನ್ಯ ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ವ್ಯಾಪಕವಾದ ಮಂಜು ಆವರಿಸಿದೆ.
ಉತ್ತರ ಪ್ರದೇಶದ ಆಗ್ರಾ, ಬರೇಲಿ, ಸಹರಾನ್‌ಪುರ ಮತ್ತು ಗೋರಖ್‌ಪುರ; ಪಂಜಾಬ್‌ನ ಅಮೃತಸರ, ಲುಧಿಯಾನ, ಬಟಿಂಡಾ ಮತ್ತು ಆದಂಪುರ; ದೆಹಲಿಯ ಸಫ್ದರ್ಜಂಗ್; ಮಧ್ಯಪ್ರದೇಶದ ಗ್ವಾಲಿಯರ್; ಬಿಹಾರದ ಭಾಗಲ್ಪುರ; ಮತ್ತು ಜಾರ್ಖಂಡ್‌ನ ಡಾಲ್ಟೊಂಗಂಜ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಗೋಚರತೆ ಶೂನ್ಯಕ್ಕೆ ಇಳಿದಿದೆ.
ಅತ್ಯಂತ ಕಳಪೆ ಗೋಚರತೆಯು ವಿಮಾನ ನಿಲ್ದಾಣ ಕಾರ್ಯಾಚರಣೆಗಳ ಮೇಲೆ ತೀವ್ರ ಪರಿಣಾಮ ಬೀರಬಹುದು ಮತ್ತು ಹೆದ್ದಾರಿಗಳು ಹಾಗೂ ರೈಲು ಮಾರ್ಗಗಳಲ್ಲಿ ವಿಳಂಬಕ್ಕೆ ಕಾರಣವಾಗಬಹುದು ಎಂದು ಐಎಂಡಿ ಎಚ್ಚರಿಸಿದೆ.
ಉತ್ತರ ಪ್ರದೇಶದ ಹಲವು ಜಿಲ್ಲೆಗಳು, ಉತ್ತರಾಖಂಡದ ಕೆಲವು ಭಾಗಗಳು, ಹರಿದ್ವಾರ ಮತ್ತು ಉಧಮ್ ಸಿಂಗ್ ನಗರ ಹಾಗೂ ಅಮೃತಸರ, ಪಟಿಯಾಲ ಮತ್ತು ಸಂಗ್ರೂರ್ ಸೇರಿದಂತೆ ಪಂಜಾಬ್‌ನ ಹಲವಾರು ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ.
ಹವಾಮಾನ ತಜ್ಞರು ಅಪಾಯಕಾರಿ ಚಾಲನಾ ಪರಿಸ್ಥಿತಿ ಮತ್ತು ರಸ್ತೆ ಅಪಘಾತಗಳ ಅಪಾಯ ಹೆಚ್ಚಾಗುವುದರ ಜೊತೆಗೆ ಮಂಜು ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ಮುರಿದು ಬೀಳುವ ಸಾಧ್ಯತೆಯ ಬಗ್ಗೆ ಎಚ್ಚರಿಸಿದ್ದಾರೆ. ನಿವಾಸಿಗಳು ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಲಾಗಿದೆ.
IMD ಪ್ರಕಾರ, ಗೋಚರತೆ 0 ದಿಂದ 50 ಮೀಟರ್‌ಗಳ ನಡುವೆ ಇದ್ದಾಗ "ತುಂಬಾ ದಟ್ಟವಾದ ಮಂಜು" ಸಂಭವಿಸುತ್ತದೆ, "ದಟ್ಟವಾದ ಮಂಜು" 51 ಮತ್ತು 200 ಮೀಟರ್‌ಗಳ ನಡುವಿನ ಗೋಚರತೆಯನ್ನು ಸೂಚಿಸುತ್ತದೆ.