ಸೋನಿಯಾ ಗಾಂಧಿ 
ದೇಶ

ಕೇಂದ್ರದಿಂದ MGNREGA ಯೋಜನೆ 'ಬುಲ್ಡೋಜ್'; 'ಕರಾಳ ಕಾನೂನಿನ' ವಿರುದ್ಧ ಹೋರಾಡಲು ಸೋನಿಯಾ ಪ್ರತಿಜ್ಞೆ

ಕಾಂಗ್ರೆಸ್‌ನ X ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ಸೋನಿಯಾ ಗಾಂಧಿ ಅವರ ವಿಡಿಯೋ ಸಂದೇಶದಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ MGNREGA ಯೋಜನೆ "ಬುಲ್ಡೋಜ್" ಮಾಡಿದೆ ಎಂದು ಕಿಡಿ ಕಾರಿದ್ದಾರೆ.

ನವದೆಹಲಿ: ವಿರೋಧ ಪಕ್ಷಗಳ ತೀವ್ರ ವಿರೋಧ ಹಾಗೂ ಪ್ರತಿಭಟನೆಯ ಹೊರತಾಗಿಯೂ, ದಶಕಗಳಷ್ಟು ಹಳೆಯದಾದ ನರೇಗಾ ಯೋಜನೆ(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ ಮಹಾತ್ಮ ಗಾಂಧಿ ಹೆಸರನ್ನು ತೆಗೆದುಹಾಕುವ ಜಿ ರಾಮ್ ಜಿ ಮಸೂದೆ ಅಂಗೀಕರಿಸಿದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ನ X ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ಸೋನಿಯಾ ಗಾಂಧಿ ಅವರ ವಿಡಿಯೋ ಸಂದೇಶದಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿ, ನಿರಂಕುಶವಾಗಿ ಹಲವು ಬದಲಾವಣೆಗಳನ್ನು ಮಾಡುವ ಮೂಲಕ MGNREGA ಯೋಜನೆ "ಬುಲ್ಡೋಜ್" ಮಾಡಿದೆ ಎಂದು ಕಿಡಿ ಕಾರಿದ್ದಾರೆ.

"... ಇತ್ತೀಚೆಗೆ, ಸರ್ಕಾರ MGNREGA ಮೇಲೆ ಬುಲ್ಡೋಜರ್ ದಾಳಿ ನಡೆಸಿದ್ದು ಬಹಳ ವಿಷಾದ ಸಂಗತಿ. ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿದ್ದು ಮಾತ್ರವಲ್ಲದೆ, MGNREGAನ ರೂಪ ಮತ್ತು ರಚನೆಯನ್ನು ನಿರಂಕುಶವಾಗಿ ಬದಲಾಯಿಸಲಾಗಿದೆ. ಯಾವುದೇ ಚರ್ಚೆಯಿಲ್ಲದೆ, ಯಾರನ್ನೂ ಸಂಪರ್ಕಿಸದೆ, ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಸೂದೆಯನ್ನು ಅಂಗೀಕರಿಸಿದೆ" ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ವಿರೋಧ ಪಕ್ಷದ ನಿರಂತರ ಪ್ರತಿಭಟನೆಗಳ ಹೊರತಾಗಿಯೂ, ಕೇಂದ್ರವು ಕಳೆದ ಗುರುವಾರ ಸಂಸತ್ತಿನಲ್ಲಿ ವಿಕಸಿತ ಭಾರತ - ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್(ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆ, 2025 ಅನ್ನು ಮಂಡಿಸಿ ಅಂಗೀಕರಿಸಿದೆ.

ಈ ಮಸೂದೆಯು ಮಹಾತ್ಮ ಗಾಂಧಿ ಹೆಸರನ್ನು ತೆಗೆದುಹಾಕಲಿದೆ ಮತ್ತು ರಾಜ್ಯಗಳ ಮೇಲಿನ ಹಣಕಾಸಿನ ಹೊರೆಯನ್ನು ಶೇಕಡಾ 40ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ ಗ್ರಾಮೀಣ ಕುಟುಂಬಗಳಿಗೆ ನೀಡುವ ಉದ್ಯೋಗವನ್ನು ಹಣಕಾಸು ವರ್ಷದಲ್ಲಿ 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸುವ ಮೂಲಕ ಎಂಜಿಎನ್‌ಆರ್‌ಇಜಿಎಗೆ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ.

ಮನಮೋಹನ್ ಸಿಂಗ್ ಆಳ್ವಿಕೆಯಲ್ಲಿ ಎಂಜಿಎನ್‌ಆರ್‌ಇಜಿಎ ಜಾರಿಗೆ ತಂದಿದ್ದನ್ನು ನೆನಪಿಸಿಕೊಂಡ ಸೋನಿಯಾ ಗಾಂಧಿ, ಕಾರ್ಮಿಕರ ವಲಸೆ ತಡೆಯುವ ಮತ್ತು ಗ್ರಾಮ ಪಂಚಾಯತ್‌ಗಳಿಗೆ ಸಬಲೀಕರಣ ನೀಡುವ ಮೂಲಕ ಕೋಟ್ಯಂತರ ಬಡ ಕುಟುಂಬಗಳಿಗೆ ಸಹಾಯ ಮಾಡಿದ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

"20 ವರ್ಷಗಳ ಹಿಂದೆ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಎಂಜಿಎನ್‌ಆರ್‌ಇಜಿಎ ಕಾಯ್ದೆಯನ್ನು ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು ಎಂಬುದು ನನಗೆ ಇನ್ನೂ ಸ್ಪಷ್ಟವಾಗಿ ನೆನಪಿದೆ. ಇದು ಅಂತಹ ಕ್ರಾಂತಿಕಾರಿ ಹೆಜ್ಜೆಯಾಗಿತ್ತು, ಇದರ ಪ್ರಯೋಜನಗಳು ಕೋಟ್ಯಂತರ ಗ್ರಾಮೀಣ ಕುಟುಂಬಗಳನ್ನು ತಲುಪಿದವು. ವಿಶೇಷವಾಗಿ, ಇದು ವಂಚಿತರು, ಶೋಷಿತರು ಮತ್ತು ಬಡವರಿಗೆ ಜೀವನೋಪಾಯದ ಸಾಧನವಾಯಿತು" ಎಂದು ಅವರು ತಿಳಿಸಿದ್ದಾರೆ.

ಕಳೆದ ಒಂದು ದಶಕದಿಂದ, ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಈ ಯೋಜನೆಯನ್ನು ದುರ್ಬಲಗೊಳಿಸಲು ಹಲವು ಪ್ರಯತ್ನಗಳನ್ನು ಮಾಡಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

"ಕಳೆದ 11 ವರ್ಷಗಳಲ್ಲಿ, ಮೋದಿ ಸರ್ಕಾರವು ನಿರುದ್ಯೋಗಿಗಳು, ಬಡವರು ಮತ್ತು ಗ್ರಾಮೀಣ ಪ್ರದೇಶದ ವಂಚಿತರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ. MGNREGA ಅನ್ನು ದುರ್ಬಲಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದೆ. ಆದರೂ COVID ಸಮಯದಲ್ಲಿ ಅದು ಬಡವರಿಗೆ ಜೀವನಾಡಿಯಾಗಿತ್ತು" ಎಂದು ಅವರು ಹೇಳಿದ್ದಾರೆ.

MGNREGA ಅನ್ನು ಜಾರಿಗೆ ತರುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದೆ ಎಂದು ಪುನರುಚ್ಚರಿಸಿದ ಸೋನಿಯಾ ಗಾಂಧಿ, ಈ ಯೋಜನೆ "ಯಾವುದೇ ಒಂದು ಪಕ್ಷ-ನಿರ್ದಿಷ್ಟ ವಿಷಯವಲ್ಲ. ಇದು ರಾಷ್ಟ್ರೀಯ ಹಿತಾಸಕ್ತಿ ಮತ್ತು ಜನರ ಹಿತಾಸಕ್ತಿಗೆ ಸಂಬಂಧಿಸಿದ ಯೋಜನೆಯಾಗಿತ್ತು. ಈ ಕಾನೂನನ್ನು ದುರ್ಬಲಗೊಳಿಸುವ ಮೂಲಕ, ಮೋದಿ ಸರ್ಕಾರವು ದೇಶಾದ್ಯಂತ ಗ್ರಾಮೀಣ ವಲಯದ ಕೋಟ್ಯಂತರ ರೈತರು, ಕಾರ್ಮಿಕರು ಮತ್ತು ಭೂಹೀನ ಬಡವರ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದೆ" ಎಂದು ಕಾಂಗ್ರೆಸ್ ನಾಯಕಿ ವಾಗ್ದಾಳಿ ನಡೆಸಿದ್ದಾರೆ.

ಈ "ಕರಾಳ ಕಾನೂನಿನ" ವಿರುದ್ಧ ಹೋರಾಡಲು ನಾನು ಬದ್ಧನಾಗಿರುತ್ತೇನೆ ಎಂದು ಸೋನಿಯಾ ಗಾಂಧಿ ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದ್ದುಮುಚ್ಚಿ ದೆಹಲಿಗೆ ಹೋಗಲ್ಲ; ಸೂಕ್ತ ಸಮಯದಲ್ಲಿ ಹೈಕಮಾಂಡ್ ನಮ್ಮನ್ನು ಕರೆಯುತ್ತದೆ: ಡಿಕೆಶಿ

ಒಳನುಸುಳುವವರನ್ನು ಹೊರಗಿಡಲು SIR; ಆದ್ರೆ ದಶಕಗಳಿಂದ ಕಾಂಗ್ರೆಸ್ ಅವರನ್ನು ರಕ್ಷಿಸಿತ್ತು: ಪ್ರಧಾನಿ ಮೋದಿ

BMC election: ಕಾಂಗ್ರೆಸ್ ಏಕಾಂಗಿ ಸ್ಪರ್ಧೆ; ಉದ್ಧವ್ ಠಾಕ್ರೆ, ಶರದ್ ಪವಾರ್ ಜತೆ ಮೈತ್ರಿ ಇಲ್ಲ

ಬುರುಡೆ ಗ್ಯಾಂಗ್ ವಿರುದ್ಧ ತಿರುಗಿಬಿದ್ದ ಚಿನ್ನಯ್ಯ: ಜೀವ ಬೆದರಿಕೆ ಆರೋಪ ಮಾಡಿ ಐವರ ವಿರುದ್ಧ ಪೊಲೀಸರಿಗೆ ದೂರು!

'ಜಗತ್ತಿನಲ್ಲಿ ಅಧಿಕಾರದ ಅರ್ಥ ಈಗ ಬದಲಾಗಿದೆ...'; ಅಮೆರಿಕ-ಚೀನಾ ಜೊತೆ ಸಂಬಂಧ ವೃದ್ಧಿ ಮತ್ತಷ್ಟು ಜಟಿಲ: ಜೈಶಂಕರ್

SCROLL FOR NEXT