ನಾರಾಯಣಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭಾನುವಾರ ಜಿಲ್ಲಾ ಮೀಸಲು ಪಡೆಯ ಯೋಧರೊಬ್ಬರು ಆಕಸ್ಮಿಕವಾಗಿ ಪಿಸ್ತೂಲ್ ನಿಂದ ಹಾರಿದ ಗುಂಡು ತಗಲು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಡೇನಾರ್ ಶಿಬಿರದಲ್ಲಿ ಇಂದು ಬೆಳಗ್ಗೆ ನಕ್ಸಲ್ ಪೀಡಿತ ಛೋಟೆಡೊಂಗರ್ ಪೊಲೀಸ್ ಠಾಣೆ ಪ್ರದೇಶದ ಅರಣ್ಯದಲ್ಲಿ ಶನಿವಾರ ಆರಂಭವಾಗಿದ್ದ ಕಾರ್ಯಾಚರಣೆಯಿಂದ ಭದ್ರತಾ ಸಿಬ್ಬಂದಿಯ ತಂಡ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗಸ್ತು ತಿರುಗುವ ತಂಡವು ಇಂದು ಬೆಳಗ್ಗೆ ಶಿಬಿರವನ್ನು ತಲುಪಿತು. ಭದ್ರತಾ ಸಿಬ್ಬಂದಿ ವಾಹನ ಹತ್ತುತ್ತಿದ್ದಾಗ, ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ ಯೋಧ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾನ್ಸ್‌ಟೇಬಲ್ ಬಲದೇವ್ ಸಿಂಗ್ ಹುರ್ರಾ(33) ಅವರ ತಲೆಯ ಬಳಿ ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಧೌಡೈ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೆ ಅತಿಯಾದ ರಕ್ತಸ್ರಾವದಿಂದಾಗಿ ಅವರು ಸಾವನ್ನಪ್ಪಿದರು ಎಂದು ಅಧಿಕಾರಿ ಹೇಳಿದ್ದಾರೆ.
ಆಕಸ್ಮಿಕವಾಗಿ ಹಾರಿದ ಗುಂಡು ಮೃತ ಯೋಧನಿಗೆ ಸೇರಿದ ಪಿಸ್ತೂಲ್ ನಿಂದ ಹಾರಿದೆಯೋ ಅಥವಾ ಅವರ ಸಹೋದ್ಯೋಗಿಗಳಲ್ಲಿ ಒಬ್ಬರಿಗೆ ಸೇರಿದ ಪಿಸ್ತೂಲ್ ನಿಂದ ಹಾರಿದೆಯೋ ಎಂಬುದನ್ನು ಪೊಲೀಸರು ತಕ್ಷಣ ದೃಢಪಡಿಸಿಲ್ಲ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.