ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ ರಾಷ್ಟ್ರ ರಾಜಧಾನಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್‌ಡಿಎನ ಉನ್ನತ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಆದಾಗ್ಯೂ, ಬಿಹಾರ ಸಿಎಂ ನಿಯಮಿತ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ಚಿಕಿತ್ಸೆಗಾಗಿ ದೆಹಲಿಗೆ ತೆರಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವಿನ ನಂತರ ಮೊದಲ ಬಾರಿ ನಿತೀಶ್ ಕುಮಾರ್ ಅವರು ರಾಷ್ಟ್ರ ರಾಜಧಾನಿಗೆ ಭೇಟಿ ನೀಡುತ್ತಿದ್ದಾರೆ.
ನವದೆಹಲಿ ತಲುಪಿದ ನಂತರ, ನಿತೀಶ್ ಮೊದಲು ಅವರ ನಿವಾಸಕ್ಕೆ ಹೋಗಿ ನಂತರ ತಪಾಸಣೆಗಾಗಿ ಏಮ್ಸ್ ಭೇಟಿ ನೀಡುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿತೀಶ್ ಕುಮಾರ್ ಅವರು ಸಾಮಾನ್ಯವಾಗಿ ವರ್ಷಕ್ಕೊಮ್ಮೆಯಾದರೂ ದೆಹಲಿಯ ಏಮ್ಸ್ ನಲ್ಲಿ ಸಂಪೂರ್ಣ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ.
ದೆಹಲಿಯ ಏಮ್ಸ್‌ನ ವೈದ್ಯರು ಬಹಳ ಸಮಯದಿಂದ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. "ನಿತೀಶ್ ಅವರ ದೆಹಲಿ ಭೇಟಿ ಅವರ ನಿಯಮಿತ ಆರೋಗ್ಯ ತಪಾಸಣೆಯ ಒಂದು ಭಾಗವಾಗಿದೆ" ಎಂದು ಸಿಎಂ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ಅವರು ತಮ್ಮ ಇತರ ಕಾರ್ಯಕ್ರಮಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ಜೆಡಿಯು ಮುಖ್ಯಸ್ಥರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಮುಂದಿನ ಐದು ವರ್ಷಗಳಲ್ಲಿ ಹೊಸ ಸರ್ಕಾರ ಚುನಾವಣಾ ಪೂರ್ವ ಘೋಷಣೆಗಳನ್ನು ಈಡೇರಿಸಬೇಕಾಗಿರುವುದರಿಂದ ಬಿಹಾರಕ್ಕಾಗಿ ಎನ್‌ಡಿಎ ಭವಿಷ್ಯದ ಕಾರ್ಯತಂತ್ರದ ಬಗ್ಗೆ ಬಿಹಾರ ಸಿಎಂ ಚರ್ಚಿಸುವ ನಿರೀಕ್ಷೆಯಿದೆ.
ಜನವರಿಯಲ್ಲಿ ಸಚಿವ ಸಂಪುಟ ವಿಸ್ತರಣೆಯಂತಹ ವಿಷಯಗಳ ಬಗ್ಗೆಯೂ ನಿತೀಶ್ ಕುಮಾರ್ ಚರ್ಚಿಸುವ ಸಾಧ್ಯತೆಯಿದೆ.