ಚೆನ್ನೈ: ಎಂಜಿಎನ್‌ಆರ್‌ಇಜಿಎಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ತೆಗೆದುಹಾಕುವ ಮೂಲಕ ಬಿಜೆಪಿಯವರು "ಮಹಾತ್ಮ ಗಾಂಧಿಯವರನ್ನು ಎರಡನೇ ಬಾರಿ ಹತ್ಯೆ ಮಾಡಿದ್ದಾರೆ" ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಭಾನುವಾರ ಕಿಡಿ ಕಾರಿದ್ದಾರೆ.
ಉದ್ಯೋಗ ಖಾತರಿ ಯೋಜನೆಯಿಂದ ಮಹಾತ್ನ ಗಾಂಧಿ ಹೆಸರು ತೆಗೆದು ಹಾಕುವ ವಿಕಸಿತ ಭಾರತ - ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್(ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಮಸೂದೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅಂಗೀಕರಿಸಿದ್ದು, ಇಂದು ರಾಷ್ಟ್ರಪತಿಗಳು ಅದಕ್ಕೆ ಅಂಕಿತ ಹಾಕಿದ್ದಾರೆ. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇಂದು ಚೆನ್ನೈನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಚಿದಂಬರಂ ಅವರು, "ನಮ್ಮ ಪಕ್ಷವು ಮನೆ ಮನೆ, ಹಳ್ಳಿ ಹಳ್ಳಿಗೆ ತೆರಳಿ ಈ ವಂಚನೆಯನ್ನು ಬಹಿರಂಗಪಡಿಸುತ್ತದೆ ಮತ್ತು ಈ ಕಾಯ್ದೆಯನ್ನು ರದ್ದುಗೊಳಿಸುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ" ಎಂದು ಹೇಳಿದರು.
"ನನ್ನ ಪ್ರಕಾರ, ಇದು ಮಹಾತ್ಮ ಗಾಂಧಿಯವರ ಎರಡನೇ ಹತ್ಯೆ. ಜನವರಿ 30, 1948 ರಂದು ಅವರನ್ನು ಒಮ್ಮೆ ಕೊಲ್ಲಲಾಯಿತು. ಈಗ ಅವರನ್ನು ಮತ್ತೆ ಕೊಂದಿದ್ದಾರೆ - ಅವರ ಸ್ಮರಣೆಯನ್ನು ಮತ್ತೆ ಕೊಂದಿದ್ದಾರೆ" ಎಂದು ಮಾಜಿ ಕೇಂದ್ರ ಹಣಕಾಸು ಸಚಿವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
"ನೀವು ಗಾಂಧಿ ಮತ್ತು ನೆಹರೂ ಅವರನ್ನು ಅಧಿಕೃತ ದಾಖಲೆಗಳಿಂದ ಅಳಿಸಿಹಾಕಲು ಪ್ರಯತ್ನಿಸಬಹುದು. ಆದರೆ ಅವರು ಬುದ್ಧ ಅಥವಾ ಯೇಸುವಿನಂತೆ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲೆಸಿದ್ದಾರೆ. ಯಾವುದೇ ಸರ್ಕಾರಿ ಆದೇಶವು ಅವರನ್ನು ಅಳಿಸಿಹಾಕಲು ಸಾಧ್ಯವಿಲ್ಲ" ಎಂದರು.
ಹೊಸ ಯೋಜನೆಗಳ ಹೆಸರನ್ನು "ಇಂಗ್ಲಿಷ್ ಅಕ್ಷರಗಳಲ್ಲಿ ಬರೆದ ಹಿಂದಿ ಪದಗಳು" ಎಂದು ಕರೆಯುವ ಸರ್ಕಾರದ ನಿರ್ಧಾರವನ್ನು ಹಿರಿಯ ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ. "ವಿಕ್ಷಿತ್ ಭಾರತ್ ಜಿ ರಾಮ್ ಜಿ" ನಂತಹ ಹೆಸರುಗಳು ದಕ್ಷಿಣ ಭಾರತೀಯರಿಗೆ ಗೊಂದಲಮಯ ಮತ್ತು ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.