ಕೋಲ್ಕತ್ತಾ: ಬಂಗಾಳಿ ಗಾಯಕಿ ಲಗ್ನಜಿತಾ ಚಕ್ರವರ್ತಿ ಅವರಿಗೆ ಕಿರುಕುಳ ನೀಡಿದ ಆರೋಪ ಮೇಲೆ ಖಾಸಗಿ ಶಾಲಾ ಮಾಲೀಕನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಭಗವಾನ್‌ಪುರ ಪೊಲೀಸ್ ಠಾಣೆ ಪ್ರದೇಶದ ಸೌತ್ ಪಾಯಿಂಟ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಜನಪ್ರಿಯ ಗಾಯಕಿ ಲಗ್ನಜಿತಾ ಅವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಶಾಲೆಯ ಸಹ ಮಾಲೀಕ ಮೆಹಬೂಬ್ ಮಲ್ಲಿಕ್ ಅವರನ್ನು ಬಂಧಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪೂರ್ವ ಮಿಡ್ನಾಪುರ ಜಿಲ್ಲೆಯ ಭಗವಾನ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಶಹನ್ಶಾ ಹಕ್ ಅವರ ವಿರುದ್ಧವೂ ಜಿಲ್ಲೆಯ ಹಂಗಾಮಿ ಪೊಲೀಸ್ ವರಿಷ್ಠಾಧಿಕಾರಿ ಮಿತುನ್ ಕುಮಾರ್ ಡೇ ಅವರು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
ಎಸ್‌ಡಿಪಿಒ ಮಟ್ಟದ ಅಧಿಕಾರಿಯೊಬ್ಬರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
'ದೇವಿ ಚೌಧುರಾನಿ' ಚಿತ್ರದ 'ಜಾಗೋ ಮಾ' ಹಾಡನ್ನು ಹಾಡುತ್ತಿದ್ದಾಗಿ ಪ್ರೇಕ್ಷಕರಿಂದ ಒಬ್ಬ ವ್ಯಕ್ತಿ ವೇದಿಕೆಯ ಮೇಲೆ ಬಂದು ತಮ್ಮ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು. ಆದಾಗ್ಯೂ, ಪರಿಸ್ಥಿತಿ ಉಲ್ಬಣಗೊಳ್ಳುವ ಮೊದಲು ಇತರರು ಮಧ್ಯಪ್ರವೇಶಿಸಿ ಆ ವ್ಯಕ್ತಿಯನ್ನು ತಡೆದರು. ಈ ಘಟನೆಯ ನಂತರ ನಾನು ಆ ಹಾಡನ್ನು ಹಾಡಲಿಲ್ಲ ಎಂದು ಲಗ್ನಜಿತಾ ಹೇಳಿಕೊಂಡಿದ್ದಾರೆ.
ಈ ಘಟನೆಯು ನನಗೆ ಭಯದ ವಾತಾವರಣ ಸೃಷ್ಟಿ ಮಾಡಿದ್ದು ಕಾರ್ಯಕ್ರಮದ ವಾತಾವರಣವನ್ನು ಅಸ್ತವ್ಯಸ್ತಗೊಳಿಸಿತು ಎಂದು ಗಾಯಕಿ ದೂರಿನಲ್ಲಿ ತಿಳಿಸಿದ್ದಾರೆ.
ಇದೀಗ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಆರೋಪಿ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕನಾಗಿದ್ದು, "ಜಾತ್ಯತೀತ" ಹಾಡುಗಳನ್ನು ಹಾಡಲು ನಿರಾಕರಿಸಿದ್ದಕ್ಕಾಗಿ ಗಾಯಕಿಯನ್ನು ಗುರಿಯಾಗಿಸಿಕೊಂಡಿದೆ ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದೆ. ಕಲಾವಿದೆ ಮತ್ತು ಅವರ ತಂಡಕ್ಕೆ ಕಿರುಕುಳ ಮತ್ತು ಬೆದರಿಕೆಗೆ ಹಾಕಲಾಗಿದೆ ಎಂದು ಬಿಜೆಪಿ ನಾಯಕ ಶಂಕುದೇವ್ ಪಾಂಡಾ ಆರೋಪಿಸಿದ್ದಾರೆ.