ನವದೆಹಲಿ: ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ದೆಹಲಿಯಿಂದ ಮುಂಬೈಗೆ ಹಾರಾಟ ಶುರು ಮಾಡಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ವಾಪಸ್ ಲ್ಯಾಂಡ್ ಆಗಿದೆ.
ಎಂಜಿನ್ ನಲ್ಲಿ ತಾಂತ್ರಿಕ ದೋಷ ಪತ್ತೆ ಮಾಡಿದ ಪೈಲಟ್, ತಕ್ಷಣ ನಿರ್ಧಾರ ತೆಗೆದುಕೊಂಡಿದ್ದಾರೆ. ಸುರಕ್ಷತೆಗೆ ಆದ್ಯತೆ ನೀಡಿ ಏರ್ ಟರ್ನ್ಅರೌಂಡ್ ಮಾಡಲು ನಿರ್ಧರಿಸಿದ್ದಾರೆ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಏರ್ ಇಂಡಿಯಾ ವಿಮಾನ AI-887 ನಲ್ಲಿ ಈ ಘಟನೆ ನಟೆದಿದೆ. ವಿಮಾನವನ್ನು ಬೋಯಿಂಗ್ 777-300ER (VT-ALS) ನೊಂದಿಗೆ ನಿರ್ವಹಿಸಲಾಗಿತ್ತು.
ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ವಿಮಾನದ ಫ್ಲಾಪ್ಗಳನ್ನು ಹಿಂತೆಗೆದುಕೊಳ್ಳುತ್ತಿದ್ದಾಗ, ವಿಮಾನ ಸಿಬ್ಬಂದಿಗೆ ಬಲ ಎಂಜಿನ್ನಲ್ಲಿ ಕಡಿಮೆ ತೈಲ ಒತ್ತಡದ ಎಚ್ಚರಿಕೆ ದೊರೆತಿದೆ. ಕೆಲ ಕ್ಷಣದಲ್ಲೇ, ಎಂಜಿನ್ ತೈಲ ಒತ್ತಡ ಸಂಪೂರ್ಣವಾಗಿ ಶೂನ್ಯಕ್ಕೆ ಇಳಿದಿದೆ. ಇದು ತಾಂತ್ರಿಕ ಅಪಾಯವನ್ನು ಸೃಷ್ಟಿಸಿದೆ.
ಈ ಹಿನ್ನೆಲೆಯಲ್ಲಿ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ, ಪೈಲಟ್ಗಳು ತಕ್ಷಣವೇ ಏರ್ ಟರ್ನ್ಅರೌಂಡ್ ಮಾಡಲು ನಿರ್ಧರಿಸಿದ್ದಾರೆ. ವಿಮಾನವನ್ನು ಎಚ್ಚರಿಕೆಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಿದ್ದಾರೆ.
ಎಲ್ಲಾ ಪ್ರಮಾಣಿತ ಕಾರ್ಯವಿಧಾನಗಳನ್ನು ಅನುಸರಿಸಿ ಸುರಕ್ಷಿತವಾಗಿ ವಿಮಾನವನ್ನು ಕೆಳಗಿಳಿಸಲಾಗಿದೆ. ವಿಮಾನ ಸುರಕ್ಷಿತವಾಗಿ ಇಳಿದ ನಂತರ, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
ಈ ನಡುವೆ ವಿಮಾನಯಾನ ಸಂಸ್ಥೆ, ಲ್ಯಾಂಡಿಂಗ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಮತ್ತೊಂದು ವಿಮಾನ ತುರ್ತು ಭೂಸ್ಪರ್ಶ
ಇದೇ ರೀತಿ ಮತ್ತೊಂದು ವಿಮಾನ ಕೂಡ ತುರ್ತು ಭೂಸ್ಪರ್ಶ ಮಾಡಿದೆ. ಇಂದು ಬೆಳಿಗ್ಗೆ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೆಡ್ಡಾದಿಂದ ಕೋಝಿಕ್ಕೋಡ್ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನದಲ್ಲಿ 160 ಪ್ರಯಾಣಿಕರಿದ್ದರು. ಟೇಕ್ ಆಫ್ ಆದ ನಂತರ ಲ್ಯಾಂಡಿಂಗ್ ಗೇರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು, ಟೈರ್ ವೈಫಲ್ಯಕ್ಕೆ ಕಾರಣವಾಗಿದೆ. ಬಳಿಕ ಪೈಲಟ್ ತಕ್ಷಣ ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿ ತುರ್ತು ಲ್ಯಾಂಡಿಂಗ್ಗೆ ಅನುಮತಿ ಕೋರಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿಮಾನ ಅಪಘಾತ ಸಂಖ್ಯೆಗಳು ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಣ್ಣ ಲೋಪ ಕಾಣಿಸಿಕೊಂಡರೂ ಪೈಲಟ್ ಗಳು ವಿಮಾನವನ್ನು ಲ್ಯಾಂಡ್ ಮಾಡುವ ಅವಕಾಶ ನೀಡಲಾಗುತ್ತಿದೆ.