ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅನ್ನು ಸಾಂಪ್ರದಾಯಿಕವಾಗಿ ಬೆಂಬಲಿಸುವ ಅಲ್ಪಸಂಖ್ಯಾತರು ಒಗ್ಗಟ್ಟಿನಿಂದ ಇರಬೇಕೆಂದು ಮನವಿ ಮಾಡಿದ್ದಾರೆ.
ಇತ್ತೀಚಿಗೆ ಟಿಎಂಸಿಯಿಂದ ಅಮಾನತುಗೊಂಡ ಶಾಸಕ ಹುಮಾಯೂನ್ ಕಬೀರ್ ಅವರು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ತಿಂಗಳು ಬಾಕಿ ಇರುವಾಗ ಹೊಸ ಪಕ್ಷ ಘೋಷಿಸಿದ್ದು, ಇದು ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸುವ ಸಾಧ್ಯತೆ ಇದೆ.
ಇಂದು ನಗರದಲ್ಲಿ ತೃಣಮೂಲ ಕಾಂಗ್ರೆಸ್ ಬೂತ್ ಮಟ್ಟದ ಏಜೆಂಟ್‌ಗಳ(ಬಿಎಲ್‌ಎ) ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಅಲ್ಪಸಂಖ್ಯಾತರು ಭಯಭೀತರಾಗದಂತೆ ಮನವಿ ಮಾಡಿದರು ಮತ್ತು ಬಿಜೆಪಿ ವಿರುದ್ಧ ನಿರ್ಧಾರ ತೆಗೆದುಕೊಂಡು ಎಲ್ಲರೂ ಒಗ್ಗಟ್ಟಾಗಬೇಕು" ಎಂದು ಮನವಿ ಮಾಡಿದರು.
"ಬಿಜೆಪಿ ನಿಮ್ಮ ನಡುವೆ ವಿಭಜನೆಯ ರಾಜಕೀಯ ಮಾಡಲು ಪ್ರಯತ್ನಿಸುತ್ತಿದೆ. ಆದರೆ ನೀವು ಅವರ ವಿರುದ್ಧ ಒಗ್ಗಟ್ಟಾಗಿರಬೇಕು" ಎಂದು ಮುಖ್ಯಮಂತ್ರಿ ಹೇಳಿದರು.
ಭರತ್‌ಪುರದ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಇತ್ತೀಚೆಗೆ ಪಕ್ಷದಿಂದ ಅಮಾನತುಗೊಳಿಸಿದೆ. ಇದರಲ್ಲಿ ಕೋಮು ಹೇಳಿಕೆ ಮತ್ತು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯ ಮಾದರಿಯಲ್ಲಿ ಮಸೀದಿಯ ನಿರ್ಮಾಣವೂೂ ಸೇರಿದೆ.
ಈ ಮಧ್ಯೆ ಕಬೀರ್ ಅವರು ಇಂದು ತಮ್ಮ ಹೊಸ ಪಕ್ಷ ಜನತಾರ್ ಉನ್ಯನ್ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಬೆಲ್ದಂಗಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಬೀರ್, 2026 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಸ್ಪರ್ಧಿಸಲಿರುವ ಎಂಟು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು. ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರ ಮತ್ತು ಬೆಲ್ದಂಗಾ ಎಂಬ ಎರಡು ಸ್ಥಾನಗಳಿಂದ ತಾವು ಸ್ಪರ್ಧಿಸುವುದಾಗಿ ಮತ್ತು ಶೀಘ್ರದಲ್ಲೇ ಇತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದರು.