ವೆಲ್ಲಿಂಗ್ಟನ್: ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮವಾಗಿದೆ ಎಂದು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಸೋಮವಾರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಮುಕ್ತ ವ್ಯಾಪಾರ ಒಪ್ಪಂದವು (FTA) ಭಾರತಕ್ಕೆ ನಮ್ಮ ರಫ್ತಿನ ಶೇ. 95 ರಷ್ಟು ಸುಂಕವನ್ನು ಕಡಿಮೆ ಮಾಡುತ್ತದೆ ಅಥವಾ ರದ್ದುಗೊಳಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಮುಕ್ತ ವ್ಯಾಪಾರ ಒಪ್ಪಂದದಿಂದ ಮುಂಬರುವ ಎರಡು ದಶಕಗಳಲ್ಲಿ ಭಾರತಕ್ಕೆ ನ್ಯೂಜಿಲೆಂಡ್ ರಫ್ತುಗಳು ವರ್ಷಕ್ಕೆ 1.1 ಬಿಲಿಯನ್ ಡಾಲರ್ ನಿಂದ (ಶತಕೋಟಿ) 1.3 ಬಿಲಿಯನ್ ಡಾಲರ್ ಗೆ ( ಶತಕೋಟಿ) ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಉಭಯ ರಾಷ್ಟ್ರಗಳ ವ್ಯಾಪಾರ ಒಪ್ಪಂದ ಅಂತಿಮವಾದ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಒಪ್ಪಂದವು ಎರಡು ದೇಶಗಳ ನಡುವಿನ ಸ್ನೇಹವನ್ನು ಬಲಪಡಿಸುತ್ತದೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದ್ದು, ಹೊಸ ಒಪ್ಪಂದವು 1.4 ಶತಕೋಟಿ ಭಾರತೀಯ ಗ್ರಾಹಕರು ನ್ಯೂಜಿಲೆಂಡ್ ನೊಂದಿಗೆ ವ್ಯವಹಾರ ಮಾಡಲು ಅವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದ್ದಾರೆ.