

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿ ಮತ್ತು ಕನ್ನಡತಿ ಶ್ರೀಲೀಲಾ ನಟನೆಯ ಜೊತೆಗೇ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ಎಂಬಿಬಿಎಸ್ ಪದವಿ ಪಡೆದು ವೈದ್ಯೆಯಾಗಿದ್ದಾರೆ.
ಶ್ರೀಲೀಲಾ ನಿನ್ನೆಯಷ್ಟೆ ತಮ್ಮ ವೈದ್ಯ ಪದವಿಯನ್ನು ಗಳಿಸಿಕೊಂಡಿದ್ದು, ಮುಂಬೈನ ಡಿವೈ ವೈದ್ಯಕೀಯ ವಿವಿಯಲ್ಲಿ ಆಯೋಜಿಸಲಾಗಿದ್ದ ಪದವಿ ವಿತರಣಾ ಘಟಿಕೋತ್ಸವ ಸಮಾರಂಭದಲ್ಲಿ ಹಲವಾರು ವಿದ್ಯಾರ್ಥಿಗಳ ಜೊತೆಗೆ ಶ್ರೀಲೀಲಾ ಸಹ ತಮ್ಮ ವೈದ್ಯ ಪದವಿಯನ್ನು ಸ್ವೀಕಾರ ಮಾಡಿದ್ದಾರೆ.
ಶ್ರೀಲೀಲಾ ವೈದ್ಯಕೀಯ ಪದವಿ ಸ್ವೀಕಾರ ಮಾಡುತ್ತಿರುವ ಹಲವು ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ವೈರಲ್ ಆಗುತ್ತಿದೆ. ವಿಡಿಯೋನಲ್ಲಿ ಪ್ರತಿಜ್ಞೆ ಬೋಧಿಸಿದ ಬಳಿಕ ‘ನೀವುಗಳು ಇದೀಗ ಅಧಿಕೃತವಾಗಿ ವೈದ್ಯರು’ ಎಂಬ ಘೋಷಣೆ ಬಂದ ಕೂಡಲೇ ಖುಷಿಯಾಗಿ ನಗುತ್ತಿರುವ ಶ್ರೀಲೀಲಾ ಅವರ ವಿಡಿಯೋ ಇದೀಗ ವೈರಲ್ ಆಗಿದೆ.
ಕನ್ನಡದ ʼಕಿಸ್ʼ ಚಿತ್ರದ ಮೂಲಕ 2019ರಲ್ಲಿ ಸಿನಿ ಜರ್ನಿಯನ್ನು ಆರಂಭಿಸಿದ ಶ್ರೀಲೀಲಾ, 2021ರಲ್ಲಿ ʼಪೆಲ್ಲಿ ಸಂಡಾಡ್ʼ ಎನ್ನುವ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡು ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆ ಬಳಿಕ ಟಾಲಿವುಡ್‌ನ ಧಮಾಕಾ (2022),ಭಗವಂತ ಕೇಸರಿ (2023), ಗುಂಟೂರ್ ಕಾರಮ್ (2024) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು.
ಮುಂದೆ ಅವರು ʼಉಸ್ತಾದ್ ಭಗತ್ ಸಿಂಗ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಬಾಲಿವುಡ್‌ನಲ್ಲಿ ಅವರು ಅನುರಾಗ್ ಬಸು – ಕಾರ್ತಿಕ್ ಆರ್ಯನ್ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾಲಿವುಡ್ ನಟ ಧನುಷ್ ಅವರ 55ನೇ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Advertisement