ನವದೆಹಲಿ: ಡೆಲ್ಲಿ ಮೆಟ್ರೋ ಜಾಲ ಮತ್ತಷ್ಟು ವಿಸ್ತರಣೆಗೆ ಕೇಂದ್ರ ಸರ್ಕಾರ ಸಮ್ಮತಿಸಿದ್ದು, 12,015 ಕೋಟಿ ರೂ ವೆಚ್ಚದಲ್ಲಿ ಮೆಟ್ರೋ ವಿಸ್ತರಣೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಕೇಂದ್ರ ಸಚಿವ ಎ ವೈಷ್ಣವ್ ಅವರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೇಂದ್ರ ಸಚಿವ ಸಂಪುಟವು 12,015 ಕೋಟಿ ರೂ. ಮೌಲ್ಯದ ದೆಹಲಿ ಮೆಟ್ರೋದ 5ಎ ಹಂತಕ್ಕೆ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಪ್ರಸ್ತಾವಿತ ವಿಸ್ತರಣೆಯು 16 ಕಿ.ಮೀ. ಮೆಟ್ರೋ ಮಾರ್ಗದಲ್ಲಿ 13 ನಿಲ್ದಾಣಗಳು ನಿರ್ಮಾಣವಾಗಲಿವೆ. ಈ ಪೈಕಿ 10 ಸುರಂಗ ನಿಲ್ದಾಣಗಳಾದರೆ, ಉಳಿದ ಮೂರು ಎಲಿವೇಟೆಡ್ ನಿಲ್ದಾಣವಾಗಲಿವೆ.
ಸದ್ಯ ಡೆಲ್ಲಿ ಮೆಟ್ರೋ ಭಾರತದಲ್ಲಿರುವ ಅತಿದೊಡ್ಡ ಮೆಟ್ರೋ ಜಾಲ ಎನಿಸಿದೆ. 395 ಕಿಮೀ ಉದ್ದದ ನೆಟ್ವರ್ಕ್ ಹೊಂದಿದೆ. ಈಗ ಐದನೇ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಂಡರೆ, ಇದರ ಒಟ್ಟು ಜಾಲ 400 ಕಿಮೀ ದಾಟುತ್ತದೆ.