ನವದೆಹಲಿ: ಮುಂದಿನ ತಲೆಮಾರಿನ ಆಕಾಶ್ -ಎನ್ ಜಿ ಕ್ಷಿಪಣಿ ವ್ಯವಸ್ಥೆಯ ಪರೀಕ್ಷೆಯನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯಶಸ್ವಿಯಾಗಿ ನಡೆಸಿದ್ದು, ಭಾರತೀಯ ಸಶಸ್ತ್ರ ಪಡೆಗೆ ಮತ್ತಷ್ಟು ಬಲ ಬಂದಿದೆ.
ಈ ಸಂಬಂಧ ವಿಡಿಯೋವೊಂದನ್ನು DRDO ಹಂಚಿಕೊಂಡಿದ್ದು, ಹೆಚ್ಚಿನ ವೇಗದಲ್ಲಿ, ಕಡಿಮೆ ಎತ್ತರ ಹಾಗೂ ದೀರ್ಘ ಶ್ರೇಣಿ ಸೇರಿದಂತೆ ವಿವಿಧ ವೈಮಾನಿಕ ಗುರಿಗಳನ್ನು ಅತ್ಯಂತ ನಿಖರತೆಯಿಂದ ನಾಶಪಡಿಸಲಾಗಿದೆ ಎಂದು ಹೇಳಿದೆ.
ಈ ಕ್ಷಿಪಣಿ ವ್ಯವಸ್ಥೆಯನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿದೆ.
ದೇಶೀಯವಾಗಿ ಅಭಿವೃದ್ಧಿಪಡಿಸಿದ ರೇಡಿಯೊ ಫ್ರೀಕ್ವೆನ್ಸಿ ಅನ್ವೇಷಕ, ಡ್ಯುಯಲ್ ಪಲ್ಸ್ ಸಾಲಿಡ್ ರಾಕೆಟ್ ಮೋಟಾರ್, ಸ್ವದೇಶಿ ರಾಡಾರ್ ಮತ್ತು ಸಿ2 ವ್ಯವಸ್ಥೆಯನ್ನು ಹೊಂದಿರುವ ಆಕಾಶ್ ಎನ್ ಜಿ ಕ್ಷಿಪಣಿ ವಿವಿಧ ಶ್ರೇಣಿಯ ವೈಮಾನಿಕ ಬೆದರಿಕೆಗಳ ವಿರುದ್ಧ ವಾಯು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಬಲ ವ್ಯವಸ್ಥೆಯಾಗಿದೆ ಎಂದು ತಿಳಿಸಿದೆ.
ಈ ಯಶಸ್ವಿ ಪರೀಕ್ಷೆಗೆ DRDO ಹಿರಿಯ ವಿಜ್ಞಾನಿಗಳು ಮತ್ತು ಭಾರತೀಯ ವಾಯುಪಡೆಯ ಅಧಿಕಾರಿಗಳು ಸಾಕ್ಷಿಯಾದರು. ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಡಿಆರ್‌ಡಿಒ, ಐಎಎಫ್ ಮತ್ತು ರಕ್ಷಣಾ ಉದ್ಯಮವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ. ಅತ್ಯಾಧುನಿಕ ಆಕಾಶ್-ಎನ್‌ಜಿ ವ್ಯವಸ್ಥೆಯು ಐಎಎಫ್‌ನ ವಾಯು ರಕ್ಷಣಾ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.