ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳ ನಡುವೆ ರಾಷ್ಟ್ರ ರಾಜಧಾನಿಯಲ್ಲಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಬುಧವಾರ ಮಾತನಾಡಿದ್ದಾರೆ.
ಸಿಎಂ ಬದಲಾವಣೆ ವದಂತಿಯನ್ನು ಅವರು ತಳ್ಳಿ ಹಾಕಿದ್ದು, ಮುಖ್ಯಮಂತ್ರಿ ಕುರ್ಚಿಗಾಗಿ ವಿವಾದವೇನೂ ಇಲ್ಲ. ಉಪ ಮುಖ್ಯಮಂತ್ರಿಯಾಗಿ ಮುಂದುವರಿಯಲು ನನಗೆ ತೃಪ್ತಿ ಇದೆ ಎಂದಿದ್ದಾರೆ.
ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಕುಮಾರ್, ಆಂತರಿಕ ಭಿನ್ನಾಭಿಪ್ರಾಯಗಳು ಅಥವಾ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಸಭೆ ಎಂಬಿತ್ಯಾದಿ ವದಂತಿಗಳು ಮಾಧ್ಯಮಗಳಲ್ಲಿ ಮಾತ್ರ ಬರುತ್ತಿದೆ. ನಾನು ಯಾವುದೇ ಎಐಸಿಸಿ ವರಿಷ್ಠರನ್ನೂ ಭೇಟಿ ಮಾಡುತ್ತಿಲ್ಲ. ಉಪ ಮುಖ್ಯಮಂತ್ರಿಯಾಗಿ ಮುಂದುವರಿಯಲು ನನಗೆ ಸಂತೋಷವಿದೆ.
ಪಕ್ಷದ ಕಾರ್ಯಕರ್ತನಾಗಿರಲು ಇಷ್ಟಪಡುತ್ತೇನೆ ಎಂದು ಹೇಳುವ ಮೂಲಕ ರಾಜ್ಯದಲ್ಲಿನ ಮುಖ್ಯಮಂತ್ರಿ ಬದಲಾವಣೆ ಅಥವಾ ಸಂಭಾವ್ಯ ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ತೆರೆ ಎಳೆದರು.
ಯಾವುದೇ ದಿನ ಕಾಂಗ್ರೆಸ್ ಪಕ್ಷ ನಿರ್ಧಾರ ತೆಗೆದುಕೊಳ್ಳಬಹುದು!
ಈ ಮಧ್ಯೆ ಮಾಧ್ಯಮಗಳ ಪುನರಾವರ್ತಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಯಾವುದೇ ಹೆಸರನ್ನು ಊಹಾಪೋಹ ಮಾಡಬಾರದು. ನಾಯಕತ್ವಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟದ್ದು, ಯಾವುದೇ ದಿನವಾದರೂ ಕಾಂಗ್ರೆಸ್ ಪಕ್ಷ ನಿರ್ಧಾರ ತೆಗೆದುಕೊಳ್ಳಬಹುದು. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು.
ಈ ಮಧ್ಯೆ ಪ್ರಿಯಾಂಕಾ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂಬ ಊಹಾಪೋಹ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆ ಶಿವಕುಮಾರ್, ನನಗೆ ಈ ವಿಷಯಗಳ ಬಗ್ಗೆ ತಿಳಿದಿಲ್ಲ. ಎಐಸಿಸಿ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ" ನನ್ನ ನಾಯಕರು ಎಂದು ಹೇಳಿದರು.
ಸಿದ್ದು ಜೊತೆಗೆ ಮಾತನಾಡಲು ಮಾಧ್ಯಮದವರಿಗೆ ಸಲಹೆ: ಕರ್ನಾಟಕದಲ್ಲಿನ ಸಚಿವ ಸಂಪುಟ ಪುನಾರಚನೆ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆ ಶಿವಕುಮಾರ್, ಈ ಸಂಬಂಧ ನೀವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ಎಂದು ಮಾಧ್ಯಮದವರಿಗೆ ಸಲಹೆ ನೀಡಿದರು. ತಮ್ಮ ದೆಹಲಿ ಭೇಟಿಯು ಸಂಪೂರ್ಣವಾಗಿ ಆಡಳಿತಾತ್ಮಕವಾಗಿದೆಯೇ ಹೊರತು ರಾಜಕೀಯವಲ್ಲ ಎಂದು ಪುನರುಚ್ಚರಿಸಿದರು.