ನವದೆಹಲಿ: ದೆಹಲಿಯ ಗಾಳಿಯ ಗುಣಮಟ್ಟ ಮಂಗಳವಾರ ಗಣನೀಯವಾಗಿ ಹದಗೆಟ್ಟಿದ್ದು, ಮತ್ತೆ ತೀವ್ರ ಮಟ್ಟಕ್ಕೆ ಕುಸಿತವಾದ ವೇಳೆಯಲ್ಲೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಟೀಕಿಸಿದ್ದಾರೆ.
ದೆಹಲಿಯಲ್ಲಿ ನಡೆದ ಹಿರಿಯ ಪತ್ರಕರ್ತ ಮತ್ತು ಮಾಜಿ ಕೇಂದ್ರ ಮಾಹಿತಿ ಆಯುಕ್ತ ಉದಯ್ ಮಹೂರ್ಕರ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ನಾನು ಇಲ್ಲಿ ವಾರಕ್ಕೆ 2 ದಿನ ವಾಸಿಸುತ್ತಿದ್ದೇನೆ, ಈ ಮಾಲಿನ್ಯದಿಂದಾಗಿ ನನಗೆ ಸೋಂಕು ಬರುತ್ತದೆ ಎಂದಿದ್ದಾರೆ. ದೆಹಲಿ ಮಾಲಿನ್ಯದಿಂದ ತತ್ತರಿಸುತ್ತಿರುವುದು ಏಕೆ? ಎಂದು ಪ್ರಶ್ನಿಸಿದರು.
ದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಮಾಲಿನ್ಯಕ್ಕೆ ಸಾರಿಗೆಯು ಶೇಕಡಾ 40 ರಷ್ಟು ಕೊಡುಗೆ ನೀಡುತ್ತದೆ. ನಾನು ಸಾರಿಗೆ ಸಚಿವನಾಗಿ ಶೇಕಡಾ 40 ರಷ್ಟು ಮಾಲಿನ್ಯವು ಸಾರಿಗೆಯಿಂದಲೇ ಸಂಭವಿಸುತ್ತದೆ ಎಂದು ಹೇಳುತ್ತೇನೆ ಎಂದರು.
ಶೇಕಡಾ 40 ರಷ್ಟು ಮಾಲಿನ್ಯವು ನಮ್ಮಿಂದಲೇ... ಪಳೆಯುಳಿಕೆ ಇಂಧನದಿಂದಾಗಿ. ಪಳೆಯುಳಿಕೆ ಇಂಧನಗಳನ್ನು ಆಮದು ಮಾಡಿಕೊಳ್ಳಲು ಮತ್ತು ಮಾಲಿನ್ಯವನ್ನು ಹೆಚ್ಚಿಸಲು ನಾವು 22 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದೇವೆ ಎಂದರು.
ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಗಮನಾರ್ಹವಾಗಿ ಕಡಿಮೆ ಮಾಲಿನ್ಯಕ್ಕೆ ಕಾರಣವಾಗುವ ಪರ್ಯಾಯಗಳನ್ನು ಅಳವಡಿಸಿಕೊಳ್ಳುವ ತತ್ ಕ್ಷಣದ ಅಗತ್ಯವನ್ನು ಗಡ್ಕರಿ ಒತ್ತಿ ಹೇಳಿದರು. ಪರ್ಯಾಯ ಇಂಧನ ಮತ್ತು ಜೈವಿಕ ಇಂಧನದಿಂದ ನಾವು ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಸಾಧ್ಯವಿಲ್ಲವೇ? ಎಂದರು
ತಮ್ಮ ಪರಿಸರ ಸ್ನೇಹಿ ಫ್ಲೆಕ್ಸ್-ಇಂಧನ ವಾಹನದ ಬಗ್ಗೆ ಮಾತನಾಡಿ, ಸಂಪೂರ್ಣವಾಗಿ ಎಥೆನಾಲ್ ನಿಂದ ಚಾಲಿತ ವಾಹನ ಮಾಲಿನ್ಯವನ್ನು ಕಡಿಮೆ ಮಾಡುವ ಸಾಮರ್ಥ್ಯದ ಬಗ್ಗೆ ಹೇಳಿದರು. ಆಮದು ಮಾಡಿಕೊಂಡ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಾಮರ್ಥ್ಯ ಒತ್ತಿ ಹೇಳಿದರು.
ರಾಜಧಾನಿಯು 24 ಗಂಟೆಗಳ ವಾಯು ಗುಣಮಟ್ಟ ಸೂಚ್ಯಂಕ 412 ರೊಂದಿಗೆ ಭಾರತದ ಎರಡನೇ ಅತ್ಯಂತ ಕಲುಷಿತ ನಗರವಾಗಿದೆ.