ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ಹುಟ್ಟುಹಬ್ಬದ ಪಾರ್ಟಿ ಮುಗಿದ ನಂತರ ಖಾಸಗಿ ಐಟಿ ಕಂಪನಿಯ ಮಹಿಳಾ ಮ್ಯಾನೇಜರ್ ಅನ್ನು ಮನೆಗೆ ಬಿಡುವ ನೆಪದಲ್ಲಿ ಚಲಿಸುವ ಕಾರಿನಲ್ಲಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಪಾರ್ಟಿಯ ನಂತರ ಎಲ್ಲಾ ಅತಿಥಿಗಳು ಕ್ರಮೇಣ ಹೊರಟುಹೋದರು. ಮಹಿಳೆಯನ್ನು ಒಂಟಿಯಾಗಿ ಬಿಟ್ಟಿದ್ದಾರೆ.
ಕಳೆದ ಶನಿವಾರ ಹುಟ್ಟುಹಬ್ಬದ ಪಾರ್ಟಿಯ ನಂತರ ತನ್ನ ಕಂಪನಿಯ ಸಿಇಒ, ಮಹಿಳಾ ಕಾರ್ಯನಿರ್ವಾಹಕ ಮುಖ್ಯಸ್ಥೆ ಮತ್ತು ಅವರ ಪತಿ ತನ್ನನ್ನು ಕಾರಿನಲ್ಲಿ ಕರೆದೊಯ್ದರು ಎಂದು ಸಂತ್ರಸ್ತೆ ಮಹಿಳೆ ಆರೋಪಿಸಿದ್ದಾರೆ.
ಮಹಿಳಾ ಕಾರ್ಯನಿರ್ವಾಹಕ ಮುಖ್ಯಸ್ಥೆ ತನ್ನ ಕಾರಿನಲ್ಲಿ ನನ್ನನ್ನು ಕರೆದೊಯ್ದರು. ಅವರ ಪತಿ ಮತ್ತು ಸಿಇಒ ಕೂಡ ಕಾರಿನಲ್ಲಿದ್ದರು. ಸಿಇಒ ಪತಿ ಮಹಿಳೆಯನ್ನು ಮನೆಗೆ ಬಿಡಲು ಹೊರಟರು. ಈ ವೇಳೆ ದಾರಿಯಲ್ಲಿ, ಅವರು ಅಂಗಡಿಯಿಂದ ಸಿಗರೇಟ್ ಹೋಲುವ ವಸ್ತುವೊಂದನ್ನು ಖರೀದಿಸಿ ಮಹಿಳೆಗೆ ನೀಡಿದರು. ಅದನ್ನು ಸೇವಿಸಿದ ನಂತರ ಮಹಿಳೆ ಪ್ರಜ್ಞಾಹೀನಳಾಗಿದ್ದಾಳೆ ಎಂದು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮರುದಿನ ಬೆಳಿಗ್ಗೆ ಸಂತ್ರಸ್ತ ಮಹಿಳೆ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿರುವ ಬಗ್ಗೆ ಅರಿವಾಗಿದೆ. ನಂತರ ಅವರು ದೂರು ದಾಖಲಿಸಲು ನಿರ್ಧರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
"ದೂರಿನ ಆಧಾರದ ಮೇಲೆ, ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಯ ವರದಿ ಮತ್ತು ಹೇಳಿಕೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಉದಯಪುರ ಎಸ್ಪಿ ಯೋಗೇಶ್ ಗೋಯಲ್ ತಿಳಿಸಿದ್ದಾರೆ.