ರಾಂಚಿ (ಜಾರ್ಖಂಡ್): ನಾಯಕತ್ವದ ಕುರಿತಾದ ಹೇಳಿಕೆಗಳು ಕಾಂಗ್ರೆಸ್‌ನ ಆಂತರಿಕ ವಿಷಯವಾಗಿದ್ದು, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಸಮರ್ಥರಾಗಿದ್ದಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ವಕ್ತಾರ ಮನೋಜ್ ಪಾಂಡೆ ಹೇಳಿದ್ದಾರೆ.
'ಇದು ಕಾಂಗ್ರೆಸ್‌ನ ಆಂತರಿಕ ವಿಷಯ. ಪ್ರಿಯಾಂಕಾ ಗಾಂಧಿ ಒಬ್ಬ ಸಮತೋಲಿತ ನಾಯಕಿ... ರಾಜಕೀಯದಲ್ಲಿ ಅಗತ್ಯವಿರುವ ಎಲ್ಲ ಗುಣಗಳನ್ನು ಅವರು ಹೊಂದಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ಪ್ರಧಾನಿ ಸ್ಥಾನಕ್ಕೆ ಅರ್ಹರು...' ಎಂದು ಪಾಂಡೆ ಸುದ್ದಿಸಂಸ್ಥೆ ANIಗೆ ತಿಳಿಸಿದ್ದಾರೆ.
ಮಂಗಳವಾರ ಬಿಜೆಪಿ ವಕ್ತಾರ ಶಹಜಾದ್ ಪೂನವಾಲಾ ಅವರು ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಕ್ಷುಬ್ಧತೆ ಇದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜನರು ಮತ್ತು ಪಕ್ಷದ ಸದಸ್ಯರ ಬೆಂಬಲವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದರು.
'ರಾಹುಲ್ ಗಾಂಧಿಯವರ ಮೇಲೆ ಇನ್ನು ನಂಬಿಕೆ ಇಲ್ಲ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಸ್ಪಷ್ಟವಾಗಿ ಹೇಳಿದ್ದಾರೆ. 'ರಾಹುಲ್ ಹಟಾವೋ ಪ್ರಿಯಾಂಕಾ ಗಾಂಧಿ ಲಾವೋ'. ಈಗ ಅವರು ಪ್ರಿಯಾಂಕಾ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡುವತ್ತ ಕೆಲಸ ಮಾಡಲು ಬಯಸುತ್ತಾರೆ. ರಾಬರ್ಟ್ ವಾದ್ರಾ ಸ್ವತಃ ಇದನ್ನು ಅನುಮೋದಿಸಿದ್ದಾರೆ. ಇದರರ್ಥ ರಾಹುಲ್ ಗಾಂಧಿ ಸಾರ್ವಜನಿಕ ಮತಗಳನ್ನು ಕಳೆದುಕೊಂಡಿರುವುದು ಮಾತ್ರವಲ್ಲ; ಅವರ ಮಿತ್ರಪಕ್ಷಗಳು ಅವರನ್ನು ತಿರಸ್ಕರಿಸಿವೆ ಮತ್ತು ಈಗ ಜನಪಥ್‌ನಲ್ಲಿಯೂ ಸಮಸ್ಯೆ ಇದೆ ಎಂದು ತೋರುತ್ತದೆ. ರಾಹುಲ್ ಗಾಂಧಿಗೆ 'ಜನಮತ್' ಇಲ್ಲ, 'ಸಂಗತ್' ಇಲ್ಲ, ಅಥವಾ 'ಜನಪಥ್'ನಿಂದ ಬೆಂಬಲವಿಲ್ಲ' ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯನ್ನು 'ಪ್ರಧಾನಿ'ಯಾಗಿ ಮಾಡೇ ಮಾಡ್ತೀವಿ, ಇಂದಿರಾಗಾಂಧಿಯಂತೆ ಹೇಗೆ ಸೇಡು ತೀರಿಸಿಕೊಳ್ಳುತ್ತಾರೆ ಎಂಬುದನ್ನು ನೋಡ್ತಾ ಇರಿ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಮಂಗಳವಾರ ಹೇಳಿದ್ದರು.
ನಂತರ ಇಮ್ರಾನ್ ಮಸೂದ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ, ರಾಹುಲ್ ಗಾಂಧಿ ಅಷ್ಟೇ ಅಲ್ಲ, ಪ್ರಿಯಾಂಕಾ ಗಾಂಧಿ ಕೂಡ ಕಾಂಗ್ರೆಸ್ ಪಕ್ಷದ ನಾಯಕರು ಎಂದು ಹೇಳಿದರು.