ಅನಂತ್ ನಾಗ್ (ಜಮ್ಮು-ಕಾಶ್ಮೀರ): ದಕ್ಷಿಣ ಕಾಶ್ಮೀರದ ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಕಾಣಿಸಿಕೊಂಡಿದ್ದು, ಉಗ್ರರಿಗಾಗಿ ಭದ್ರತಾಪಡೆಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಮಾರುಕಟ್ಟೆ ಪ್ರದೇಶದಲ್ಲಿ ಉಗ್ರರು ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಈ ಹಿನ್ನೆಲೆಯಲ್ಲಿ ಭದ್ರತಾಪಡೆಗಳು ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರಿಗಾಗಿ ತೀವ್ರ ಹುಡುಕಾಟ ಪ್ರಾರಂಭಿಸಿದೆ. ಪ್ರಸ್ತುತ ಡೆಂಗರ್ಪೋರಾ ಮತ್ತು ಕಾಜಿಬಾಗ್ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿರುವ ಇಬ್ಬರು ಉಗ್ರರನ್ನು ಕುಲ್ಗಾಂಮ್ ಜಿಲ್ಲೆಯ ಖೆರ್ವಾನ್ ನಿವಾಸಿ ಮೊಹಮದ್ ಲತೀಫ್ ಭಟ್ ಹಾಗೂ ಪಾಕಿಸ್ತಾನದ ಹಂಜುಲ್ಲಾ ಎಂದು ಅನುಮಾನಿಸಲಾಗಿದೆ, ಆದರೆ, ಈ ಬಗ್ಗೆ ಅಧಿಕೃತ ದೃಢೀಕರಣಗಳು ಇನ್ನೂ ತಿಳಿದುಬಂದಿಲ್ಲ.
ಶಂಕಿತರನ್ನು ಪತ್ತೆಹಚ್ಚಲು ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಶೋಧ ನಡೆಸುತ್ತಿದ್ದಾರೆ.
ಭಯೋತ್ಪಾದಕರ ಚಲನವಲನಗಳನ್ನು ಪತ್ತೆ ಮಾಡಲು ಭದ್ರತಾಪಡೆಗಳು ಗುಪ್ತಚರ ಹಾಗೂ ಸ್ಥಳೀಯ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ.