ಹೈದರಾಬಾದ್: ಡಿಸೆಂಬರ್ 2024 ರಲ್ಲಿ ಪುಷ್ಪ 2 ಚಿತ್ರ ಬಿಡುಗಡೆಯ ಸಮಯದಲ್ಲಿ ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಹೈದರಾಬಾದ್ ನ ಚಿಕ್ಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ್ ಅವರನ್ನು 11 ನೇ ಆರೋಪಿ (A11) ಎಂದು ಹೆಸರಿಸಿ ಒಟ್ಟು 23 ಆರೋಪಿಗಳ ಪಟ್ಟಿ ಸಲ್ಲಿಸಿದ್ದಾರೆ.
ಸಂಧ್ಯಾ ಥಿಯೇಟರ್ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದು ಹೀಗಾಗಿ ಸಂಧ್ಯಾ ಥಿಯೇಟರ್ ಮಾಲೀಕರನ್ನೇ ಆರೋಪಿ 1 (A1) ಎಂದು ಹೆಸರಿಸಲಾಗಿದೆ.
ಚಿತ್ರ ಬಿಡುಗಡೆಯ ಸಮಯದಲ್ಲಿ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದರು ಮತ್ತು ಅವರ ಮಗ ಗಂಭೀರವಾಗಿ ಗಾಯಗೊಂಡರು.
ಆರೋಪ ಪಟ್ಟಿಯಲ್ಲಿ ಮೂವರು ವ್ಯವಸ್ಥಾಪಕರು ಮತ್ತು ಎಂಟು ಬೌನ್ಸರ್‌ಗಳನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿದೆ. ನಟ ಅಲ್ಲು ಅರ್ಜುನ್ ಅವರ ಭದ್ರತಾ ತಂಡವು ಈ ಕೇಸ್ ನಲ್ಲಿ ಆರೋಪಿಯಾಗಿದೆ.
ಪೊಲೀಸರ ನಿರ್ಲಕ್ಷ್ಯ
ಈ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು, ಸುರಕ್ಷತಾ ಕ್ರಮಗಳನ್ನು ನೇರವೇರಿಸುವಲ್ಲಿ ವಿಫಲವಾಗಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಸಂಧ್ಯಾ ಥೀಯೆಟರ್ಗೆ ಭೇಟಿ ಕೊಡುತ್ತಾರೆಂದು ತಿಳಿದರೂ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದ ಆರೋಪದ ಮೇಲೆ ಅದರ ಆಡಳಿತ ಮಂಡಳಿ ಮತ್ತು ಮಾಲೀಕರ ಹೆಸರನ್ನೂ ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ.
ಅಲ್ಲದೇ ಜನಜಂಗುಳಿ ಹೆಚ್ಚಿದ್ದರೂ ಅದನ್ನು ಲೆಕ್ಕಿಸದೆ ಮಂದುವರೆದಿದ್ದಕ್ಕಾಗಿ ಅಲ್ಲು ಅರ್ಜುನ್ ಹೆಸರನ್ನ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಾರೆಯಾಗಿ 24 ವ್ಯಕ್ತಿಗಳ ಪಟ್ಟಿಯಲ್ಲಿ ಅಲ್ಲು ಅರ್ಜುನ್ ಅವರ ವೈಯಕ್ತಿಕ ಮ್ಯಾನೇಜರ್, ಸಿಬ್ಬಂದಿ ಸದಸ್ಯರು ಮತ್ತು ಎಂಟು ಖಾಸಗಿ ಬೌನ್ಸರ್‌ಗಳು ಸೇರಿದ್ದಾರೆ. ಅವರ ಬೇಜವಾಬ್ದಾರಿತನದ ನಡೆಯಿಂದಾಗಿ ಸಮಸ್ಯೆ ಉಲ್ಬಣಿಸಿದವು ಎಂದು ತೀರ್ಮಾನಿಸಲಾಗಿದೆ.
ಏನಿದು ಪ್ರಕರಣ?
ಡಿಸೆಂಬರ್ 4, 2024 ರಂದು ಪುಷ್ಪ 2 ಚಿತ್ರ ತೆರೆಕಂಡ ಸಮಯದಲ್ಲಿ ಹೈದರಾಬಾದ್ ಆರ್‌ಟಿಸಿ ಥಿಯೇಟರ್‌ನ ಪ್ರೀಮಿಯರ್ ಸ್ಕ್ರೀನಿಂಗ್ನಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ನೋಡಲು ಅಪಾರ ಜನಸಮೂಹ ಸೇರಿತ್ತು.
ಈ ವೇಳೆ ಕಾಲ್ತುಳಿತ ಉಂಟಾಗಿ ಓರ್ವ ಮಹಿಳೆಯ ಸಾವಿಗೆ ಕಾರಣವಾಯಿತು.ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ರೇವತಿ ಸಾವನ್ನಪ್ಪಿದ್ದು, ಅವರ ಅಪ್ರಾಪ್ತ ಮಗ ಶ್ರೀತೇಜ್ಗೆ ಆಮ್ಲಜನಕದ ಕೊರತೆ ಉಂಟಾದ ಕಾರಣ ಹಾಸಿಗೆ ಹಿಡಿಯುವಂತಾಯಿತು.