ಗುವಾಹಟಿ: ನಿಷೇಧಿತ ಬಾಂಗ್ಲಾದೇಶಿ ಭಯೋತ್ಪಾದಕ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ(ಜೆಎಂಬಿ)ದ ಅಂಗಸಂಸ್ಥೆಯಾದ ಇಮಾಮ್ ಮಹ್ಮದರ್ ಕಫಿಲಾ(ಐಎಂಕೆ) ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ ಅಸ್ಸಾಂ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) 11 ಜನರನ್ನು ಬಂಧಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಗುವಾಹಟಿಯ ಪೊಲೀಸ್ ಆಯುಕ್ತ ಪಾರ್ಥಸಾರಥಿ ಮಹಾಂತ, ಕೇಂದ್ರ ಸಂಸ್ಥೆಗಳು ಒದಗಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) 11 ಜನರನ್ನು ಬಂಧಿಸಿದೆ ಎಂದು ಹೇಳಿದರು.
"ನಿನ್ನೆ ರಾತ್ರಿ ತ್ರಿಪುರಾ ಜೊತೆಗೆ ಅಸ್ಸಾಂನ ಬಾರ್ಪೇಟಾ, ಚಿರಾಂಗ್, ಬಕ್ಸಾ ಮತ್ತು ದರ್ರಾಂಗ್ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತು" ಎಂದು ಅವರು ತಿಳಿಸಿದ್ದಾರೆ.
"ಈ ಬಂಧಿತ ಆರೋಪಿಗಳು ಬಾಂಗ್ಲಾದೇಶ ಮೂಲದ ಸಂಘಟನೆಗಳ ನೇರ ಆದೇಶದ ಮೇರೆಗೆ ಕೆಲಸ ಮಾಡುತ್ತಿದ್ದರು. ಅಸ್ಸಾಂ ಮತ್ತು ಈಶಾನ್ಯದ ಉಳಿದ ಭಾಗಗಳನ್ನು ಅಸ್ಥಿರಗೊಳಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು" ಎಂದು ಎಸ್‌ಟಿಎಫ್ ಮುಖ್ಯಸ್ಥರು ಹೇಳಿದ್ದಾರೆ.
ಏಕಕಾಲದಲ್ಲಿ ನಡೆಸಿದ ದಾಳಿಯ ಸಮಯದಲ್ಲಿ ಪೊಲೀಸ್ ತಂಡಗಳು ಸಾಕಷ್ಟು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಮಹಾಂತ ತಿಳಿಸಿದ್ದಾರೆ.
ಅಸ್ಸಾಂನಿಂದ ಬಂಧಿಸಲ್ಪಟ್ಟವರನ್ನು ನಾಸಿಮ್ ಉದ್ದೀನ್ ಅಲಿಯಾಸ್ ನಜೀಮುದ್ದೀನ್ ಅಲಿಯಾಸ್ ತಮೀಮ್(24), ಜುನಾಬ್ ಅಲಿ(38), ಅಫ್ರಹಿಂ ಹುಸೇನ್ (24), ಮಿಜಾನೂರ್ ರೆಹಮಾನ್ (46), ಸುಲ್ತಾನ್ ಮೆಹಮೂದ್ (40), ಎಂಡಿ ಸಿದ್ದಿಕ್ ಅಲಿ (46), ರಸೀದುಲ್ ಆಲಂ (28), ಮಹಿಬುಲ್ ಖಾನ್ (25), ಶಾರುಕ್ ಹುಸೇನ್ (22) ಮತ್ತು ಎಂಡಿ ದಿಲ್ಬರ್ ರಜಾಕ್ (26) ಎಂದು ಗುರುತಿಸಲಾಗಿದೆ.
ಜಾಗೀರ್ ಮಿಯಾ(33)ನನ್ನು ತ್ರಿಪುರಾದಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.