ನವದೆಹಲಿ: ಸಂಸತ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದು, ಈ ಬಾರಿ ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊಗಳುತ್ತಲೇ ಕಾಂಗ್ರೆಸ್ ಪಕ್ಷಕ್ಕೆ ನೇರವಾಗಿ ತಿವಿದಿದ್ದಾರೆ.
ಹೌದು... ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ಶಾಯರಿ ಮೂಲಕ ಗುಣಗಾನ ಮಾಡಿದರು.
ಸುಮಾರು ಒಂದೂವರೆ ಗಂಟೆಗಳ ಕಾಲ ಮಾತನಾಡಿದ ಪ್ರಧಾನಿ ಮೋದಿ, ಹೆಚ್ಚು ಕಾಲದ ಭಾಷಣದಲ್ಲಿ ಗಾಂಧಿ ಕುಟುಂಬವನ್ನು ನೇರವಾಗಿ ಗುರಿಯಾಗಿಸಿಕೊಂಡು ಟೀಕಿಸಿದರು. ನೆಹರು ಸರ್ಕಾರ ಮತ್ತು ತುರ್ತು ಪರಿಸ್ಥಿತಿಯ ಸಂದರ್ಭಗಳನ್ನು ನೆನಪಿಸಿಕೊಂಡ ಅವರು, ಕಾಂಗ್ರೆಸ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.
ಅತ್ತ ಕಾಂಗ್ರೆಸ್ ಪಕ್ಷಕ್ಕೆ ತಿವಿಯುತ್ತಲೇ ಇದ್ದ ಮೋದಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸೇವೆಯನ್ನೂ ಶ್ಲಾಘಿಸಿದರು. "ಖರ್ಗೆ ಅವರು ಹಿರಿಯ ನಾಯಕರು ಮತ್ತು ನಾನು ಅವರನ್ನು ಯಾವಾಗಲೂ ಗೌರವಿಸುತ್ತೇನೆ. ಸಾರ್ವಜನಿಕ ವ್ಯಕ್ತಿಯಾಗಿ ಇಷ್ಟು ವರ್ಷಗಳನ್ನು ಕಳೆಯುವುದು ಸಣ್ಣ ವಿಷಯವೇನಲ್ಲ ಎಂದರು.
ಇದೇ ಸಂದರ್ಭದಲ್ಲಿ ಎದ್ದು ನಿಂತ ಮಲ್ಲಿಕಾರ್ಜುನ ಖರ್ಗೆ ಮೋದಿ ಅವರ ಮಾತಿಗೆ ಅಡ್ಡಿಪಡಿಸಿದರು. ಈ ವೇಳೆ ಪ್ರಧಾನಿ ಮೋದಿ ತಮ್ಮದೇ ಶೈಲಿಯಲ್ಲಿ, ನನ್ನನ್ನು ತಡೆಯಬೇಡಿ ಖರ್ಗೆ ಅವರೇ, ನಿಮಗೆ ಇಂತಹ ಮಾತುಗಳು ನಿಮ್ಮ ಮನೆಯಲ್ಲೂ ಕೇಳಿರಲು ಸಾಧ್ಯವಿಲ್ಲ. ನಿಮ್ಮ ಮನೆಯವರೇ ನಿಮ್ಮನ್ನು ಹೊಗಳುವುದಿಲ್ಲ.. ಆ ಮಾತುಗಳನ್ನು ನಾನು ಹೇಳಿ ಬಿಡುತ್ತೇನೆ ತಡೆಯಿರಿ ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ಈ ಮಾತಿಗೆ ಇಡೀ ಸದನವೇ ನಗುವಿನಲ್ಲಿ ಮುಳುಗಿತು. ಬಳಿಕ ಮಾತು ಮುಂದುವರೆಸಿದ ಮೋದಿ, 'ಖರ್ಗೆ ಅವರು ಕವಿತೆ ಓದುವುದನ್ನು ನಾನು ನೋಡುತ್ತಿದ್ದೆ, ಮತ್ತು ಸ್ಪೀಕರ್ ಅವರನ್ನು ಅದು ಯಾವಾಗ ಎಂದು ಕೇಳಿದಾಗ, ಕಾಂಗ್ರೆಸ್‌ನ ನೋವು ಒಳಗೆ ಅಡಗಿದೆ ಎಂದು ಅವರು ಭಾವಿಸಿದರು, ಆದ್ದರಿಂದ ಅವರು ನೀರಜ್ ಅವರ ಕಾವ್ಯದ ಮೂಲಕ ಅದನ್ನು ವ್ಯಕ್ತಪಡಿಸಲು ನಿರ್ಧರಿಸಿದರು" ಎಂದು ಪ್ರಧಾನಿ ಮೋದಿ ಹೇಳಿದರು.
"ಖರ್ಗೆ ಅವರಿಗಾಗಿ ದಿವಂಗತ ಕವಿ ನೀರಜ್ ಜಿ ಅವರ ಕಾವ್ಯದ ಕೆಲವು ಸಾಲುಗಳನ್ನು ನಾನು ಹೇಳಲು ಬಯಸುತ್ತೇನೆ. ಈ ಕವಿತೆಗಳನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬರೆಯಲಾಗಿದೆ. ನೀರಜ್ ಜಿ ಹೇಳುತ್ತಾರೆ.. 'ಹೈ ಬಹುತ್ ಅಂಧೇರಾ, ಅಬ್ ಸೂರಜ್ ನಿಕಲ್ನಾ ಚಾಹಿಯೇ, ಜಿಸ್ ತರಹ್ ಸೆ ಭಿ ಯೇ ಮೌಸಂ ಬದಲ್ನಾ ಚಾಹಿಯೇ' (ಈಗ ತುಂಬಾ ಕತ್ತಲಿದೆ.. ಈಗ ಸೂರ್ಯ ಬರಲೇ ಬೇಕು... ಈರೀತಿಯಿಂದಾದರೂ ವಾತಾವರಣ ಬದಲಾಗಬೇಕು) ಎಂದು ಹೇಳಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಉಪ ರಾಷ್ಟ್ರಪತಿ ಜಗದೀಪ್ ಧಂಕರ್ ಆ ಕವಿತೆ ಬರೆದಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂದು ಹೇಳಿ ಹಾಸ್ಯ ಚಟಾಕಿ ಹಾರಿಸಿದರು.