ಮುಂಬೈ: ಕಳೆದ ತಿಂಗಳು ಮುಂಬೈನಲ್ಲಿರುವ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿದ್ದು ಯಾರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
ಮುಂಬೈ ಪೊಲೀಸರು ಪ್ರಕರಣದ ಸಂಬಂಧ ಹಲವರನ್ನು ಬಂಧಿಸಿದ್ದರೂ ದಾಳಿ ನಡೆಸಿದ್ದ ವ್ಯಕ್ತಿ ಯಾರು ಎಂಬುದಕ್ಕೆ ನಿಖರ ಉತ್ತರ ಸಿಕ್ಕಿರಲಿಲ್ಲ. ಹೀಗಾಗಿ ಈ ಪ್ರಕರಣ ಸಾಕಷ್ಟು ಗೊಂದಲಮಯವಾಗಿತ್ತು.
ಈಗ ಸ್ವತಃ ಬಾಲಿವುಡ್ ನಟ ಸೈಫ್ ಅಲಿ ಖಾನ್ ಸಿಬ್ಬಂದಿಗಳು ಈಗ ನಟನ ಮೇಲೆ ದಾಳಿ ನಡೆಸಿದ ವ್ಯಕ್ತಿಯನ್ನು ಗುರುತು ಹಿಡಿದಿದ್ದಾರೆ. ಬಾಂಗ್ಲಾದೇಶದ ಶರೀಫುಲ್ ಫಕೀರ್ ಅವರನ್ನು ಅವರ ನಿವಾಸದ ಇಬ್ಬರು ಸಿಬ್ಬಂದಿ ಗುರುತಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ (30) ಅಲಿಯಾಸ್ ವಿಜಯ್ ದಾಸ್ ಅವರನ್ನು ನಟನಿಗೆ ಇರಿದ ಆರೋಪದ ಮೇಲೆ ಕಳೆದ ತಿಂಗಳು ಬಂಧಿಸಲಾಗಿದ್ದು, ಆತ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಖಾನ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬುಧವಾರ ಮುಂಬೈ ನ ಆರ್ಥರ್ ರಸ್ತೆ ಜೈಲಿನಲ್ಲಿ ಗುರುತಿನ ಪರೇಡ್ (ಐಪಿ) ನಡೆಸಿದ್ದಾರೆ.
ಖಾನ್ ಅವರ ನಿವಾಸದ ಸಿಬ್ಬಂದಿ ಎಲಿಯಮ್ಮ ಫಿಲಿಪ್ (56) ಮತ್ತು ಮನೆಕೆಲಸಗಾರ್ತಿ ಜುನು ಶರೀಫುಲ್ ಬಂಧಿತನನ್ನು ನಟನ ಮೇಲೆ ದಾಳಿ ಮಾಡಿದ ವ್ಯಕ್ತಿ ಎಂದು ಗುರುತು ಹಿಡಿದಿದ್ದಾರೆ ಎಂದು ಅಧಿಕಾರಿ ಹೇಳಿದರು.
ಫಿಲಿಪ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಅವರ ಮೇಲೂ ಆರೋಪಿಗಳು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ತಿಂಗಳು ಮುಂಬೈ ಪೊಲೀಸರು ನಡೆಸಿದ್ದ ಮುಖ ಗುರುತಿಸುವಿಕೆ ಪರೀಕ್ಷೆಯಲ್ಲಿ ಖಾನ್ ಮೇಲೆ ಇರಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಬಾಂಗ್ಲಾದೇಶಿ ವ್ಯಕ್ತಿಯ ಮುಖ ಮತ್ತು ನಟ ವಾಸಿಸುವ ಬಾಂದ್ರಾ ಪ್ರದೇಶದ ಸತ್ಗುರು ಶರಣ್ ಕಟ್ಟಡದ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವ ವ್ಯಕ್ತಿಗೆ ಹೊಂದಿಕೆಯಾಗುತ್ತಿದೆ ಎಂಬುದು ಈಗ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 16 ರ ಮುಂಜಾನೆ ಬಾಲಿವುಡ್ ತಾರೆಯ 12 ನೇ ಮಹಡಿಯ ಅಪಾರ್ಟ್‌ಮೆಂಟ್‌ಗೆ ಶರೀಫುಲ್ ನುಗ್ಗಿ ಆರು ಬಾರಿ ಇರಿದು ಪರಾರಿಯಾಗಿದ್ದ ಮೂರು ದಿನಗಳ ನಂತರ ನೆರೆಯ ಥಾಣೆ ನಗರದಲ್ಲಿ ಬಾಂಗ್ಲಾದೇಶಿ ಪ್ರಜೆಯನ್ನು ಬಂಧಿಸಲಾಯಿತು. ಚಾಕು ದಾಳಿಯ ನಂತರ, 54 ವರ್ಷದ ಖಾನ್ ಅವರನ್ನು ಹತ್ತಿರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಎರಡು ಶಸ್ತ್ರಚಿಕಿತ್ಸೆಗಳು ನಡೆದು ಜನವರಿ 21 ರಂದು ಅವರನ್ನು ಖಾಸಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.