ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಆಮ್ ಆದ್ಮಿ ಪಕ್ಷದ (AAP)ಮತ ಹಂಚಿಕೆ ಪ್ರಮಾಣ ಸುಮಾರು ಶೇ. 10 ರಷ್ಟು ಕುಸಿತ ಕಂಡಿದೆ. ಆದರೆ ಗೆದ್ದ ಬಿಜೆಪಿ ಮತ ಗಳಿಕೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ.
26 ವರ್ಷಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರದಿಂದ ಹೊರಗಿತ್ತು. ಕಾಂಗ್ರೆಸ್ ಒಂದು ಸ್ಥಾನ ಗೆಲ್ಲದಿದ್ದರೂ ಮತ ಗಳಿಕೆ ಪ್ರಮಾಣದಲ್ಲಿ ಸ್ವಲ್ಪ ಸುಧಾರಣೆಯಾಗಿದೆ. AAP ಶೇ. 43.57 ರಷ್ಟು ಮತಗಳನ್ನು ಪಡೆದಿದೆ. ಇದು 2020 ರ ಚುನಾವಣೆಯಲ್ಲಿ ಶೇ. 53. 57 ರಷ್ಟು ಮತಗಳನ್ನು ಪಡೆದಿತ್ತು .
2015ರ ವಿಧಾನಸಭೆ ಚುನಾವಣೆಯಲ್ಲಿ ಶೇ.54.5ರಷ್ಟು ಮತ ಗಳಿಸಿತ್ತು. 2020 ಮತ್ತು 2015 ರಲ್ಲಿ ಪಕ್ಷವು ಕ್ರಮವಾಗಿ 67 ಮತ್ತು 62 ಸ್ಥಾನಗಳನ್ನು ಪಡೆಯುವ ಮೂಲಕ ಭರ್ಜರಿ ಜಯಭೇರಿ ಬಾರಿಸಿತ್ತು. ಆದರೆ ಈ ಬಾರಿ ಕೇವಲ 22 ಸ್ಥಾನಗಳಿಗೆ ಸೀಮಿತವಾಗಿದೆ.
ಮತ್ತೆ ಅಧಿಕಾರಕ್ಕೆ ಬರುತ್ತಿರುವ ಬಿಜೆಪಿ ಶೇ.45.56ರಷ್ಟು ಮತಗಳನ್ನು ಪಡೆದು 48 ಸ್ಥಾನಗಳನ್ನು ಗಳಿಸಿದೆ. 2020ರಲ್ಲಿ ಕೇಸರಿ ಪಕ್ಷದ ಮತ ಗಳಿಕೆ ಪ್ರಮಾಣ ಶೇ. 38. 51 ಮತ್ತು 2015ರಲ್ಲಿ ಶೇ. 32. 3 ರಷ್ಟಿತ್ತು.
1998 ರಿಂದ 2013 ರವರೆಗೆ 15 ವರ್ಷಗಳ ಕಾಲ ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಯಾವುದೇ ಸ್ಥಾನವನ್ನು ಗೆದ್ದಿಲ್ಲ. ಆದಾಗ್ಯೂ ಶೇ. 6.34 ರಷ್ಟು ಮತಗಳನ್ನು ಗಳಿಸಿದ್ದು, ಮತ ಹಂಚಿಕೆಯಲ್ಲಿ ಶೇಕಡಾ 2.1 ರಷ್ಟು ಸುಧಾರಣೆಯನ್ನು ಕಂಡಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 4.3 ರಷ್ಟು ಮತಗಳನ್ನು ಪಡೆದಿತ್ತು.