ಭೂಪಾಲ್: ತಮ್ಮ ಅಧಿಕಾರ ಮತ್ತು ಹಕ್ಕುಗಳನ್ನು ಪುರುಷನಿಗೆ ಹಸ್ತಾಂತರಿಸುವುದಾಗಿ ಮಹಿಳಾ ಸರಪಂಚ್ ಒಬ್ಬರು 500 ರೂಪಾಯಿಯ ಪೇಪರ್ ಮೇಲೆ ಒಪ್ಪಂದಕ್ಕೆ ಸಹಿ ಹಾಕಿರುವ ಘಟನೆ ಮಧ್ಯಪ್ರದೇಶದ ನೀಮೂಚ್ ಜಿಲ್ಲೆಯಲ್ಲಿ ನಡೆದಿದೆ.
ಜನವರಿ 24 ರಂದು ಜಿಲ್ಲೆಯ ದಾತಾ ಗ್ರಾಮ ಪಂಚಾಯತಿಯ ಸದಸ್ಯೆ (ಸರಪಂಚ್) ಕೈಲಾಶಿ ಬಾಯಿ ಕಛಾವಾ ಅವರು ಪಂಚಾಯತಿಯ ತಮ್ಮ ಸದಸ್ಯತ್ವದ ಅಧಿಕಾರ-ಹಕ್ಕುಗಳನ್ನು ದಾತಾ ಗ್ರಾಮದ ಸುರೇಶ್ ಗರಾಸಿಯಾ ಎಂಬಾತನಿಗೆ ವರ್ಗಾಯಿಸಿದ್ದಾರೆ. ಗ್ರಾಮಸ್ಥರೊಂದಿಗೆ ಒಪ್ಪಂದ ಮಾಡಿಕೊಂಡು ಅಧಿಕಾರ ಹಸ್ತಾಂತರಿಸಿರುವ ಕೈಲಾಶಿ ಅವರಿಗೆ ಜಿಲ್ಲಾ ಪಂಚಾಯತ್ ಸಿಇಒ ಅಮನ್ ವೈಷ್ಣವ್ ಅವರು ನೋಟಿಸ್ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೈಲಾಶಿ ಬಾಯಿ ಅವರು ತಮ್ಮ ಸರಪಂಚ್ ಹಕ್ಕುಗಳನ್ನು ಸುರೇಶ್ ಎಂಬಾತನಿಗೆ ಹಸ್ತಾಂತರಿಸಿದ್ದಾರೆ ಎಂಬ ದೂರು ಬಂದಿದೆ. ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 40ರ ಅಡಿಯಲ್ಲಿ ಸರಪಂಚ್ ಸ್ಥಾನದಿಂದ ಕೈಲಾಶಿ ಅವರನ್ನು ವಜಾಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕೂ ಮುನ್ನ, ಆರೋಪಗಳ ಬಗ್ಗೆ ಕೈಲಾಶಿ ಅವರಿಂದ ಪ್ರತಿಕ್ರಿಯೆ ಕೇಳಿ ನೋಟಿಸ್ ನೀಡಲಾಗಿದೆ.
ಗ್ರಾಮ ಪಂಚಾಯತಿ ಕಾರ್ಯದರ್ಶಿಗೂ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಉತ್ತರಗಳು ಬಂದ ಬಳಿಕ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಮನ್ ವೈಷ್ಣವ್ ಹೇಳಿದ್ದಾರೆ. ಒಪ್ಪಂದದ ಫೋಟೋ ಪ್ರತಿ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ.
ಕೈಲಾಶಿ ಬಾಯಿ ಅವರು ಸಹಿ ಮಾಡಿರುವ ಸ್ಟಾಂಪ್ ಪೇಪರ್‌ನ ಛಾಯಾಚಿತ್ರವನ್ನು ಪಡೆದಿದ್ದೇವೆ. ಆದರೆ ಉತ್ತರ ಬಂದ ನಂತರವೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ಹೇಳಿದ್ದಾರೆ.