ನವದೆಹಲಿ: ವಾಂಟೆಡ್ ಕ್ರಿಮಿನಲ್ ಒಬ್ಬ ಪರಾರಿಯಾಗಲು ಸಹಕರಿಸಿದ ಆರೋಪದಲ್ಲಿ ದೆಹಲಿಯ ZZP ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಲೆ ಯತ್ನದ ಆರೋಪ ಎದುರಿಸುತ್ತಿರುವ ಶಹಬಾಜ್ ಖಾನ್ ಎಂಬಾತನನ್ನು ಬಂಧಿಸಲು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಜಾಮಿಯಾದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಅಧಿಕಾರಿಗಳು ಆರೋಪಿಯನ್ನು ಯಶಸ್ವಿಯಾಗಿ ಕಸ್ಟಡಿಗೆ ತೆಗೆದುಕೊಂಡಿದ್ದ ವೇಳೆ ಅಮಾನತುಲ್ಲಾ ಖಾನ್ ಮಧ್ಯಪ್ರವೇಶಿಸಿ, ಬಂಧನದ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿ ವ್ಯಕ್ತಿಯು ಅಪರಾಧಿಯಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದರು.
ಶಾಸಕ ಖಾನ್ ಮತ್ತು ಕ್ರೈಂ ಬ್ರಾಂಚ್ ತಂಡದ ನಡುವಿನ ತೀವ್ರ ವಾಗ್ವಾದ ನಡೆಯುತ್ತಿತ್ತು. ಈ ಗೊಂದಲದ ಲಾಭಪಡೆದುಕೊಂಡ ಶಹಬಾಜ್ ಖಾನ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪಲಾಯನ ಮಾಡಿದ್ದ. ಅಮಾನತುಲ್ಲಾ ಖಾನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾಮಿಯಾ ನಗರದಲ್ಲಿ ಪೊಲೀಸ್ ತಂಡದ ಮೇಲೆ ದಾಳಿ ನಡೆಸಿದ ಆರೋಪ ಹೊತ್ತಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಅಮನತುಲ್ಲಾ ಖಾನ್ ಅವರನ್ನು ಬಂಧಿಸಲು ದೆಹಲಿ ಪೊಲೀಸರು ಹಲವೆಡೆ ದಾಳಿ ನಡೆಸಿದರು.