ಮಧುರೈ: ಆರ್ಚ್ ಕೆಡವುವ ವೇಳೆ ದುರಂತ ಸಂಭವಿಸಿದ್ದು, ಬೃಹತ್ ಕಮಾನು ಜೆಸಿಬಿ ಯಂತ್ರದ ಮೇಲೆ ಕುಸಿದು ಅದರೊಳಗಿದ್ದ ಆಪರೇಟರ್ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ಮಧುರೈ ನ ಮಟ್ಟುತಾವಣಿ ಎಂಜಿಆರ್ ಬಸ್ ನಿಲ್ದಾಣದ ಬಳಿಯ ಅಲಂಕಾರಿಕ ಕಮಾನು ಕೆಡವುವ ಪ್ರಕ್ರಿಯೆ ವೇಳೆ ಈ ದುರಂತ ಸಂಭವಿಸಿದ್ದು, ಮಧ್ಯರಾತ್ರಿ ನಡೆಯುತ್ತಿದ್ದ ಆರ್ಚ್ ಕೆಡವುವ ಕಾರ್ಯಾಚರಣೆ ವೇಳೆ ಬೃಹತ್ ಕಮಾನು ಅಗೆಯುವ ಯಂತ್ರದ ಮೇಲೆ ಬಿದ್ದಿದೆ. ಪರಿಣಾಮ ಅಗೆಯುವ ಯಂತ್ರದ ಆಪರೇಟರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳದಲ್ಲಿ ಗುತ್ತಿಗೆದಾರರಿಗೆ ಗಾಯಗಳಾಗಿವೆ.
ಮಧುರೈ ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದಾಗಿ ನ್ಯಾಯಾಲಯವು ರಸ್ತೆಗಳಲ್ಲಿರುವ ಆರ್ಚ್ ಗಳನ್ನು ಕೆಡವಲು ಆದೇಶಿಸಿತ್ತು. ಇದರ ಭಾಗವಾಗಿ ಮಟ್ಟುತಾವಣಿ ಎಂಜಿಆರ್ ಬಸ್ ನಿಲ್ದಾಣದ ಬಳಿಯ ಅಲಂಕಾರಿಕ ಕಮಾನು ಕೆಡವುವ ಪ್ರಕ್ರಿಯೆ ನಡೆಯುತ್ತಿತ್ತು. ಈ ಮಟ್ಟುತಾವಣಿಯಲ್ಲಿರುವ ನಕ್ಕೀರನ್ ಅಲಂಕಾರಿಕ ಕಮಾನು 1981 ರಲ್ಲಿ ನಿರ್ಮಿಸಲಾಗಿತ್ತು. ಪ್ರಸ್ತುತ ಇಲ್ಲಿ ಸಂಚಾರ ನಿರ್ವಹಣೆ ಕಷ್ಟವಾಗುತ್ತಿದ್ದರಿಂದ ಬುಧವಾರ ತಡರಾತ್ರಿ ಅಲಂಕಾರಿಕ ಕಮಾನು ಕೆಡವಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೇಗಾಯ್ತು ಘಟನೆ?
ಆರ್ಚ್ ಕೆಡವುವ ಸಮಯದಲ್ಲಿ, ಅಗೆಯುವ ಯಂತ್ರ ನಿರ್ವಾಹಕರು ಒಂದು ಬದಿಯಿಂದ ಕಮಾನು ತೆಗೆಯಲು ಪ್ರಾರಂಭಿಸಿದಾಗ, ಅದರ ಬೃಹತ್ ರಚನೆಯು ಆಕಸ್ಮಿಕವಾಗಿ ಅಗೆಯುವ ಯಂತ್ರದ ಮೇಲೆ ಬಿದ್ದು, ವಾಹನ ನಜ್ಜುಗುಜ್ಜಾಯಿತು. ಈ ದುರಂತದಲ್ಲಿ ಮಧುರೈನ ಉಲಕ್ಕಣಿ ಗ್ರಾಮದ ನಾಗಲಿಂಗಂ (21) ಎಂದು ಗುರುತಿಸಲಾದ ಅಗೆಯುವ ಯಂತ್ರ ನಿರ್ವಾಹಕರು ಅವಶೇಷಗಳ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಅಂತೆಯೇ ಹಲವಾರು ಗಂಟೆಗಳ ರಕ್ಷಣಾ ಪ್ರಯತ್ನದ ನಂತರ, ಅವಶೇಷಗಳನ್ನು ತೆರವುಗೊಳಿಸಲಾಯಿತು ಮತ್ತು ಅವರ ದೇಹವನ್ನು ರಕ್ಷಣಾ ತಂಡವು ಹೊರತೆಗೆದಿದೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ, ಕಮಾನು ಕುಸಿದಾಗ ಅಗೆಯುವ ಯಂತ್ರದ ಬಳಿ ನಿಂತಿದ್ದ ಮಧುರೈನ ಸಾಂಬಕುಲಂನ ನಲ್ಲತಂಬಿ ಎಂಬ ಗುತ್ತಿಗೆದಾರ ಕೂಡ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ GRH ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕೆಡವುವ ಕಾರ್ಯಾಚರಣೆ ಇದ್ದರಿಂದ ಈ ಪ್ರದೇಶದಲ್ಲಿ ವಾಹನ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿತ್ತು. ಹೀಗಾಗಿ ಘಟನೆಯಲ್ಲಿ ಬೇರೆ ಯಾವುದೇ ಗಾಯಗಳು ವರದಿಯಾಗಿಲ್ಲ. ನಗರ ಪಾಲಿಕೆ ಆಯುಕ್ತೆ ಚಿತ್ರಾ ವಿಜಯನ್ ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.