ಮಹಾಕುಂಭಮೇಳಕ್ಕೆ ಸರ್ಕಾರದಿಂದ 4,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಕ್ಕಾಗಿ ವಿಪಕ್ಷಗಳು ಟೀಕೆ ಮಾಡುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮಹಾಕುಂಭಮೇಳಕ್ಕೆ 1,500 ಕೋಟಿ ರೂಪಾಯಿಗಳಷ್ಟೇ ಖರ್ಚಾಗಿರುವುದು ಉಳಿದ ಹಣವನ್ನು ಪ್ರಯಾಗ್ ರಾಜ್ ನ ಮೂಲಸೌಕರ್ಯ ಸುಧಾರಣೆಗೆ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಹಾಕುಂಭ ಮೇಳ ಕೇವಲ ಧಾರ್ಮಿಕ ಕಾರ್ಯಕ್ರಮವಷ್ಟೇ ಅಲ್ಲ. ಉತ್ತರ ಪ್ರದೇಶಕ್ಕೆ ಪ್ರಮುಖ ಆರ್ಥಿಕ ಚಾಲನಾ ಶಕ್ತಿಯೂ ಆಗಿದೆ. 1,5000 ಕೋಟಿ ಖರ್ಚು ಮಾಡಿದರೆ 3 ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯದ ಆರ್ಥಿಕತೆಗೆ ಮರಳಿ ನೀಡುವ, ಪ್ರವಾಸೋದ್ಯಮ ಹಾಗೂ ವ್ಯಾಪಾರವನ್ನು ಹೇಗೆ ತಾನೆ ಪ್ರಶ್ನೆ ಮಾಡಲಾಗುತ್ತದೆ? ಎಂದು ಯೋಗಿ ಆದಿತ್ಯನಾಥ್ ಕೇಳಿದ್ದಾರೆ.
ಲಖನೌ ನಲ್ಲಿ ಎರಡು ಪ್ರಮುಖ ಮೇಲ್ಸೇತುವೆ ನಿರ್ಮಾಣ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಸಿಎಂ ಆದಿತ್ಯನಾಥ್, ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಸಹಕರಿಸುತ್ತಿರುವ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಉತ್ತರ ಪ್ರದೇಶಕ್ಕೆ ಆಧುನಿಕ ಸೌಕರ್ಯಗಳು ಲಭ್ಯವಾಗುತ್ತಿದ್ದು, ಪ್ರತಿ ನಾಗರಿಕನಿಗೆ ಉತ್ತಮ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೇವೆಗಳು ಲಭ್ಯವಾಗುತ್ತಿದೆ ಎಂದು ಹೇಳಿದ್ದಾರೆ.