ಮುಂಬೈ: ಪೋಷಕರ ಲೈಂಗಿಕತೆ ಕುರಿತು ಕ್ಷೇಪಾರ್ಹ ಹೇಳಿಕೆ ನೀಡಿದ್ದ ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಲಾಹಬಾದಿಯಾ ಅವರ ಫೋನ್ ಸ್ವಿಚ್ ಆಫ್ ಆಗಿರುವುದರಿಂದ ಅವರನ್ನು ಪತ್ತೆಹಚ್ಚಲು ಮುಂಬೈ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.
ಆದರೆ ಹಾಸ್ಯನಟ ಸಮಯ್ ರೈನಾ ಅವರ ಯೂಟ್ಯೂಬ್ ಶೋನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ರಣವೀರ್ ವಿರುದ್ಧ ತನಿಖೆ ನಡೆಸಲು ಮಾರ್ಚ್ 10 ರವರೆಗೆ ಸಮಯಾವಕಾಶ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಯೂಟ್ಯೂಬ್ ಶೋ ಇಂಡಿಯಾಸ್ ಗಾಟ್ ಲ್ಯಾಟೆಂಟ್‌ನಲ್ಲಿ ಪೋಷಕರು ಮತ್ತು ಲೈಂಗಿಕತೆಯ ಬಗ್ಗೆ ಅಲ್ಲಾಹಬಾದಿಯಾ ಅಸಭ್ಯ ಹೇಳಿಕೆ ನೀಡಿದ್ದಕ್ಕೆ ಭಾರಿ ಆಕ್ರೋಶವ್ಯಕ್ತವಾಗಿತ್ತು.
ಯೂಟ್ಯೂಬ್‌ನಲ್ಲಿ ಜನಪ್ರಿಯರಾಗಿರುವ ಅಲ್ಲಾಹಬಾದಿಯಾ ಅವರ ಫೋನ್ ಸ್ವಿಚ್ ಆಫ್ ಆಗಿರುವುದರಿಂದ ಖಾರ್ ಪೊಲೀಸರು ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಇನ್ನು ರೈನಾ ಅವರ ವಕೀಲರು ತಮ್ಮ ಕಕ್ಷಿದಾರರು ಅಮೆರಿಕದಲ್ಲಿದ್ದಾರೆ ಎಂದು ಹೇಳಿ, ಪೊಲೀಸರ ಬಳಿಕ ಹೆಚ್ಚಿನ ಸಮಯ ಕೋರಿದ್ದಾರೆ. ವಕೀಲರ ಕೋರಿಕೆಯ ಮೇರೆಗೆ, ಪೊಲೀಸರು ಹೇಳಿಕೆ ದಾಖಲಿಸಲು ಮಾರ್ಚ್ 10 ರವರೆಗೆ ಅವರಿಗೆ ಸಮಯ ನೀಡಿದ್ದಾರೆ.