ನವದೆಹಲಿ: ಇತ್ತೀಚೆಗೆ ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ RPF ಮಹಿಳಾ ಸಿಬ್ಬಂದಿಯೊಬ್ಬರು ಪುಟ್ಟಮಗುವನ್ನೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ದೆಹಲಿ ರೈಲು ನಿಲ್ದಾಣದಲ್ಲಿ ಕಾನ್‌ಸ್ಟೆಬಲ್ ರೀನಾ ಎಂಬುವವರು ತಮ್ಮ 1 ವರ್ಷದ ಮಗುವನ್ನು ಎದೆಗೆ ಕಟ್ಟಿಕೊಂಡು ಕರ್ತವ್ಯವನ್ನು ನಿರ್ವಹಿಸಿದರು. ನಿಲ್ದಾಣದಲ್ಲಿದ್ದ ಕೆಲ ಪ್ರಯಾಣಿಕರು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇದೀಗ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, ಮಹಿಳಾ ಸಿಬ್ಬಂದಿಯ ದ್ವಿಪಾತ್ರ ಮತ್ತು ಸೇವೆಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಂತೆಯೇ ಕೆಲವು ನೆಟಿಜನ್‌ಗಳು ರೀನಾಳ ಸಮರ್ಪಣೆಯನ್ನು ಶ್ಲಾಘಿಸಿದರೆ, ಇತರರು ಅಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಮಗುವನ್ನು ಹೊತ್ತುಕೊಂಡಿದ್ದಕ್ಕಾಗಿ ಅವರನ್ನು ಟೀಕಿಸಿದ್ದಾರೆ.
ರೀನಾರನ್ನು ಹೊಗಳಿದ ಮತ್ತೊಬ್ಬ ಬಳಕೆದಾರರು, "ತಾಯ್ತನ ಮತ್ತು ಕರ್ತವ್ಯ. ವಿವರಿಸಲು ಪದಗಳ ಅಗತ್ಯವಿಲ್ಲ. ಈ ಮಹಿಳಾ ಆರ್‌ಪಿಎಫ್ ಕಾನ್‌ಸ್ಟೆಬಲ್‌ಗೆ ಹೆಚ್ಚಿನ ಶಕ್ತಿ ನೀಡಲಿ. ಅವರ ಸೇವೆಯ ಸಮರ್ಪಣೆಗೆ ನಮನ" ಎಂದು ಬರೆದಿದ್ದಾರೆ.
ಕಾಲ್ತುಳಿತ ಪ್ರಕರಣ ತನಿಖೆ
ಇನ್ನು ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ರೈಲ್ವೆ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಅವರು, "ಜನರು ಅನಗತ್ಯವಾಗಿ ಆತುರಪಡದಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ. ಶಿಸ್ತುಬದ್ಧ ನಡವಳಿಕೆಯನ್ನು ಅನುಸರಿಸಿದರೆ, ಅಂತಹ ಘಟನೆಗಳನ್ನು ತಪ್ಪಿಸಲು ಹೆಚ್ಚಿನ ಅವಕಾಶವಿದೆ. ಪ್ರತಿಯೊಬ್ಬರೂ ಸಮರ್ಥ ನಿರ್ಧಾರ ತೆಗೆದುಕೊಳ್ಳುವವರು. ಜನದಟ್ಟಣೆ ಹೆಚ್ಚುತ್ತಿದೆ ಎಂದು ನೀವು ಭಾವಿಸಿದರೆ, ಆ ಸಮಯದಲ್ಲಿ ರೈಲು ಹತ್ತುವುದಕ್ಕಿಂತ ನಿಲ್ದಾಣದಲ್ಲಿ ನಿಲ್ಲುವುದು ಉತ್ತಮ" ಎಂದು ಹೇಳಿದ್ದಾರೆ.