ನವದೆಹಲಿ: ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಸುಪ್ರೀಂ ಕೋರ್ಟ್ ಮಂಗಳವಾರ ಬಂಧನದಿಂದ ರಕ್ಷಣೆ ನೀಡಿದೆ. ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಅಲ್ಹಾಬಾದಿಯಾ ಅವರ ಹೇಳಿಕೆಗಳ ಬಗ್ಗೆ ಕೆರಳಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು, ರಣವೀರ್ ಅವರ ಮನಸ್ಸಿನಲ್ಲಿದ್ದ ಕೊಳಕನ್ನು ಯೂಟ್ಯೂಬ್ ಶೋನಲ್ಲಿ ವಾಂತಿ ಮಾಡಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
'ನೀವು ಬಳಸಿದ ಪದಗಳು ಹೆಣ್ಣುಮಕ್ಕಳು, ಸಹೋದರಿಯರು, ಪೋಷಕರು ಮತ್ತು ಸಮಾಜವು ನಾಚಿಕೆ ಪಡುವಂತೆ ಮಾಡಿದೆ. ಇದು ವಿಕೃತ ಮನಸ್ಸನ್ನು ತೋರಿಸುತ್ತದೆ. ಇದು ಅಶ್ಲೀಲತೆಯಲ್ಲದಿದ್ದರೆ, ಮತ್ತೇನು? ನಾವು ನಿಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ಏಕೆ ರದ್ದುಗೊಳಿಸಬೇಕು ಅಥವಾ ಕ್ಲಬ್ ಮಾಡಬೇಕು?' ಎಂದು ಪೀಠ ಪ್ರಶ್ನಿಸಿತು.
ಆದಾಗ್ಯೂ, ಅದೇ ವಿಷಯವನ್ನಿಟ್ಟುಕೊಂಡು ರಣವೀರ್ ಅಲ್ಹಾಬಾದಿಯಾ ಅವರ ಮೇಲೆ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸುವುದು ಮತ್ತು ಅವರ ವಿರುದ್ಧದ ಜೀವ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಬಂಧನದಿಂದ ರಕ್ಷಿಸಬೇಕು ಎಂದು ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿನವ್ ಚಂದ್ರಚೂಡ್ ಅವರು ಪೀಠಕ್ಕೆ ಮನವಿ ಮಾಡಿದರು.
ಚಂದ್ರಚೂಡ್ ಅವರು ಅಲ್ಹಾಬಾದಿಯಾ ಅವರ ಬದುಕುವ ಹಕ್ಕನ್ನು ಉಲ್ಲೇಖಿಸಿದರು ಮತ್ತು ಒಂದೇ ಕೃತ್ಯಕ್ಕಾಗಿ ಹಲವಾರು ಸ್ಥಳಗಳಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಚಂದ್ರಚೂಡ್ ಅವರ ಮನವಿಗೆ ಒಪ್ಪಿಗೆ ನೀಡಿದ ಸುಪ್ರೀಂ ಕೋರ್ಟ್, ಬಂಧನದಿಂದ ರಕ್ಷಣೆ ನೀಡಿದೆ.
'ಅವರು ಬಳಸಿದ ಭಾಷೆಯನ್ನು ನೀವು ಸಮರ್ಥಿಸುತ್ತಿದ್ದೀರಾ?' ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಚಂದ್ರಚೂಡ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಅದು 'ಅಸಹ್ಯಕರ' ಎಂದು ಒಪ್ಪಿಕೊಂಡರು.
ಆದಾಗ್ಯೂ, ಯಾರೋ ನೀಡಿದ ಅಶ್ಲೀಲ ಹೇಳಿಕೆಗಳನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಬಹುದೇ ಎಂಬುದೇ ನಿಜವಾದ ಸಮಸ್ಯೆ ಎಂದು ಹಿರಿಯ ವಕೀಲರು ಹೇಳಿದರು.
'ನೀವು ಈ ರೀತಿಯ ವಿಷಯಗಳನ್ನು ಹೇಳುವ ಮೂಲಕ ಅಗ್ಗದ ಪ್ರಚಾರವನ್ನು ಪಡೆಯಲು ಪ್ರಯತ್ನಿಸಿದರೆ, ಬೆದರಿಕೆ ಹಾಕುವ ಮೂಲಕ ಅಗ್ಗದ ಪ್ರಚಾರವನ್ನು ಪಡೆಯಲು ಬಯಸುವವರು ಸಹ ಇರಬಹುದು' ಎಂದು ಪೀಠ ಹೇಳಿದೆ.
'ಸಮಾಜದ ಮೌಲ್ಯಗಳು ಯಾವುವು? ಸಮಾಜವು ಕೆಲವು ಸ್ವಯಂ-ವಿಕಸಿತ ಮೌಲ್ಯಗಳನ್ನು ಹೊಂದಿದೆ. ನೀವು ಅವುಗಳನ್ನು ಗೌರವಿಸಬೇಕು. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ನಿಯಮಗಳಿಗೆ ವಿರುದ್ಧವಾಗಿ ಏನು ಬೇಕಾದರೂ ಮಾತನಾಡಲು ಯಾರಿಗೂ ಪರವಾನಗಿ ಇಲ್ಲ' ಎಂದು ಪೀಠವು ಗಮನಿಸಿತು.
ಮುಂಬೈ ಮತ್ತು ಗುವಾಹಟಿಯಲ್ಲಿ ಸದ್ಯ ದಾಖಲಾಗಿರುವ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದಿರುವ ಸುಪ್ರೀಂ ಕೋರ್ಟ್, 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಎಂಬ ಯೂಟ್ಯೂಬ್ ಶೋನಲ್ಲಿ ಅವರು ನೀಡಿದ ಆಕ್ಷೇಪಾರ್ಹ ಹೇಳಿಕೆಗಳಿಗಾಗಿ ಮತ್ತೆ ಅವರ ವಿರುದ್ಧ ಯಾವುದೇ ಎಫ್‌ಐಆರ್‌ಗಳನ್ನು ದಾಖಲಿಸುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಇದಲ್ಲದೆ, ಅಲ್ಹಾಬಾದಿಯಾ ಮತ್ತು ಅವರ ಇತರ ಯೂಟ್ಯೂಬರ್‌ಗಳಿಗೆ ಮುಂದಿನ ಆದೇಶದವರೆಗೆ ವಿವಾದಾತ್ಮಕ ಯೂಟ್ಯೂಬ್ ಶೋನ ಯಾವುದೇ ಸಂಚಿಕೆಯನ್ನು ಪ್ರಸಾರ ಮಾಡದಂತೆ ಸುಪ್ರೀಂ ಕೋರ್ಟ್ ನಿರ್ಬಂಧಿಸಿದೆ.
ಥಾಣೆ ಪೊಲೀಸ್ ಠಾಣೆಗೆ ತನ್ನ ಪಾಸ್‌ಪೋರ್ಟ್ ಅನ್ನು ಒಪ್ಪಿಸುವಂತೆ ಅಲ್ಹಾಬಾದಿಯಾಗೆ ನಿರ್ದೇಶನ ನೀಡಿದೆ ಮತ್ತು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶವನ್ನು ತೊರೆಯಬಾರದು ಎಂದು ಹೇಳಿದೆ.
ಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ದಾಖಲಾದ ಎಫ್‌ಐಆರ್‌ಗಳ ತನಿಖೆಗೆ ಸಹಕರಿಸುವಂತೆ ಪೀಠವು, ಅಲ್ಹಾಬಾದಿಯಾ ಅವರಿಗೆ ಸೂಚಿಸಿದೆ.