ಹೈದರಾಬಾದ್: ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಂ ನೌಕರರು ಒಂದು ಗಂಟೆ ಮುಂಚಿತವಾಗಿ ಕಚೇರಿಯಿಂದ ಹೊರಹೋಗಲು ಅನುಮತಿ ನೀಡಿ ತೆಲಂಗಾಣ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ರೇವಂತ್ ರೆಡ್ಡಿ ಸರ್ಕಾರದ ಈ ಕ್ರಮಕ್ಕೆ ಪ್ರತಿಪಕ್ಷ ಭಾರತೀಯ ಜನತಾ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಕ್ರಮವನ್ನು ತುಷ್ಟೀಕರಣ ರಾಜಕೀಯ ಎಂದು ಟೀಕಿಸಿದ ಬಿಜೆಪಿ, ಹಿಂದೂ ಹಬ್ಬಗಳ ಸಮಯದಲ್ಲಿ ಇಂತಹ ಕ್ರಮಗಳನ್ನು ಏಕೆ ತೆಗೆದುಕೊಳ್ಳವುವುದಿಲ್ಲ ಎಂದು ಪ್ರಶ್ನಿಸಿದೆ.
ಆದರೆ ತೆಲಂಗಾಣ ಸರ್ಕಾರ ಮಾತ್ರ ಇದು ಹೊಸದೇನಲ್ಲ. ಈ ಹಿಂದೆಯೂ ಈ ರೀತಿ ಅವಕಾಶ ನೀಡಲಾಗಿದೆ ಎಂದು ಹೇಳಿದೆ.
ಅಧಿಕೃತ ಮೂಲಗಳ ಪ್ರಕಾರ, ಮಾರ್ಚ್ 3 ರಿಂದ ಮಾರ್ಚ್ 31 ರವರೆಗೆ ರಂಜಾನ್ ಸಮಯದಲ್ಲಿ, ಅಗತ್ಯ ಸೇವೆಗಳಲ್ಲಿನ ಸಿಬ್ಬಂದಿ ಹೊರತುಪಡಿಸಿ, ಇತರ ಮುಸ್ಲಿಂ ನೌಕರರು ಸಂಜೆ 4 ಗಂಟೆಗೆ ಕಚೇರಿಯಿಂದ ಮನೆಗೆ ಹೋಗಲು ಅನುಮತಿ ನೀಡಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ರಾಜಾ ಸಿಂಗ್, ಮುಸ್ಲಿಂ ಉದ್ಯೋಗಿಗಳಿಗೆ ನೀಡಲಾದ ಅನುಮತಿಯು "ತುಷ್ಟೀಕರಣ ರಾಜಕೀಯ" ಎಂದು ಹೇಳಿದ್ದಾರೆ.
ಮುಸ್ಲಿಂ ಉದ್ಯೋಗಿಗಳು ಒಂದು ಗಂಟೆ ಮುಂಚಿತವಾಗಿ ಕಚೇರಿಗಳಿಂದ ತೆರಳಬಹುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಅವರು ಆದೇಶ ಹೊರಡಿಸಿದ್ದಾರೆ. ಆದರಂತೆ ಮುಸ್ಲಿಂ ಉದ್ಯೋಗಿಗಳು ಸಾಮಾನ್ಯವಾಗಿ ಸಂಜೆ 5.00 ಗಂಟೆಗೆ ತೆರಳುವ ಬದಲು ಸಂಜೆ 4.00 ಗಂಟೆಗೆ ಹೊರಡಲು ಅನುವು ಮಾಡಿಕೊಡುತ್ತದೆ. ಈ ಆದೇಶ ಮುಸ್ಲಿಂ ಶಿಕ್ಷಕರು, ಗುತ್ತಿಗೆ ನೌಕರರು, ಹೊರಗುತ್ತಿಗೆ, ಮಂಡಳಿ ಮತ್ತು ಸಾರ್ವಜನಿಕ ವಲಯದ ಕಾರ್ಮಿಕರಿಗೆ ಅನ್ವಯಿಸುತ್ತದೆ ಎನ್ನಲಾಗಿದೆ. ಏತನ್ಮಧ್ಯೆ ತುರ್ತು ಸಂದರ್ಭದಲ್ಲಿ ಅವರ ಅವಶ್ಯಕತೆ ಇದ್ದರೆ, ಸಂಜೆ 5.00 ಗಂಟೆವರೆಗೂ ಮುಂದುವರೆಯಬೇಕೆಂದು ತಿಳಿಸಿದೆ.