ನಾಗ್ಪುರ: ಮಹಾರಾಷ್ಟ್ರದ ಆಡಳಿತಾರೂಢ ಮುಹಾಯುತಿಯಲ್ಲಿ ಭಿನ್ನಮತದ ಹೊಗೆ ವದಂತಿಗಳ ನಡುವೆ 'ನನ್ನನ್ನು ಲಘುವಾಗಿ ಪರಿಗಣಿಸಬೇಡಿ' ಎಂದು ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ತನ್ನ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
2022ರಲ್ಲಿ ತನ್ನನ್ನು ಕಡೆಗಣಿಸಿದ್ದರಿಂದ ರಾಜ್ಯ ಸರ್ಕಾರವನ್ನು ಪತನಗೊಳಿದ್ದೆ ಎಂದು ಹೇಳುವ ಮೂಲಕ ಉದ್ದವ್ ಠಾಕ್ರೆ ವಿರುದ್ಧದ ಬಂಡಾಯವನ್ನು ವಿರೋಧಿಗಳಿಗೆ ನೆನಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ, "ನನ್ನನ್ನು ಲಘುವಾಗಿ ಪರಿಗಣಿಸಬೇಡಿ; ನನ್ನನ್ನು ಯಾರು ಲಘುವಾಗಿ ಪರಿಗಣಿಸಿದ್ದರೂ ಅವರಿಗೆ ಈಗಾಗಲೇ ಹೇಳಿದ್ದೇನೆ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿರಬಹುದು, ಆದರೆ ನಾನು ಬಾಳಾಸಾಹೇಬರ ಕಾರ್ಯಕರ್ತ, ಎಲ್ಲರೂ ಅದನ್ನು ಅರ್ಥಮಾಡಿಕೊಳ್ಳಬೇಕು. 2022 ರಲ್ಲಿ ನನ್ನನ್ನು ಲಘುವಾಗಿ ತೆಗೆದುಕೊಂಡಾಗ ಸರ್ಕಾರವನ್ನು ಪತನಗೊಳಿಸಿದೆ. ಜನರ ಇಚ್ಛೆಯನ್ನು ಪ್ರತಿಬಿಂಬಿಸುವ ಸರ್ಕಾರವನ್ನು ತಂದೇವು ಎಂದು ಹೇಳಿದರು.
ಭಿನ್ನಾಭಿಪ್ರಾಯದಿಂದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕರೆದಿದ್ದ ಸಭೆಗೆ ಏಕನಾಥ್ ಶಿಂಧೆ ಗೈರಾಗಿದ್ದರು ಎಂದು ಊಹಾಪೋಹಗಳು ಹರಿದಾಡಿವೆ. 2022 ರಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು, ಆಗಿನ ಸರ್ಕಾರವನ್ನು ಪತನಗೊಳಿಸಿದ್ದ ಶಿಂಧೆ, ಶಿವಸೇನೆಯನ್ನು ಇಬ್ಬಾಗಿಸಿದ್ದರು. ತದನಂತರ ಬಿಜೆಪಿಯೊಂದಿಗೆ ಸೇರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಆದರೆ ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಬಳಿಕ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕಾಯಿತು.
ಶುಕ್ರವಾರ ನಿಗೂಢ ಅರ್ಥದಲ್ಲಿ ಮಾತನಾಡಿದ ಶಿಂಧೆ, ದೇವೇಂದ್ರ ಫಡ್ನವೀಸ್ 200 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತಾರೆ ಎಂದು ನನ್ನ ವಿಧಾನಸಭೆಯ ಮೊದಲ ಭಾಷಣದಲ್ಲಿಯೇ ಭವಿಷ್ಯ ನುಡಿದಿದ್ದೆ. ನಾವು 232 ಸ್ಥಾನಗಳನ್ನು ಗಳಿಸಿದ್ದೇವೆ. ಆದ್ದರಿಂದ, ನನ್ನನ್ನು ಲಘುವಾಗಿ ಪರಿಗಣಿಸಬೇಡಿ. ಇದರ ಸುಳಿವು ಅರಿತವರು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ನನ್ನ ಕೆಲಸವನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.