ನವದೆಹಲಿ: ಅಮೆರಿಕದಿಂದ ಪನಾಮಗೆ ಗಡಿಪಾರು ಮಾಡಲಾಗಿದ್ದ 12 ಭಾರತೀಯ ಪ್ರಜೆಗಳನ್ನು ಹೊತ್ತ ವಿಮಾನವೊಂದು ಭಾನುವಾರ ಸಂಜೆ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ಅಮೆರಿಕ ಸುಮಾರು 299 ಅಕ್ರಮ ವಲಸಿಗರನ್ನು ಪನಾಮಕ್ಕೆ ಗಡಿಪಾರು ಮಾಡಲಾದ ನಂತರ ಅಲ್ಲಿಂದ ವಾಪಸ್ಸಾದ ಭಾರತೀಯರ ಮೊದಲ ಬ್ಯಾಚ್ ಇದಾಗಿದೆ. ಅಕ್ರಮ ವಲಸಿಗರನ್ನು ಪನಾಮ ಮತ್ತು ಕೋಸ್ಟ್ ರಿಕಾಕ್ಕೆ ಗಡಿಪಾರು ಮಾಡಲಾಗುತ್ತಿದೆ. ಬಳಿಕ ಅಲ್ಲಿಂದ ತವರು ರಾಷ್ಟ್ರಗಳಿಗೆ ಕಳುಹಿಸಲಾಗುತ್ತಿದೆ.
ಪನಾಮದಿಂದ ಇಸ್ತಾನ್ ಬುಲ್ ಮಾರ್ಗವಾಗಿ ಬಂದ ಟರ್ಕಿಸ್ ಏರ್ ಲೈನ್ಸ್ ವಿಮಾನದ ಮೂಲಕ ಭಾರತದ ಪ್ರಜೆಗಳು ರಾಷ್ಟ್ರ ರಾಜಧಾನಿಗೆ ಬಂದಿಳಿದರು. ಇವರಲ್ಲಿ ನಾಲ್ವರು ಪಂಜಾಬ್, ಮೂವರು ಹರಿಯಾಣ ಹಾಗೂ ಮೂವರು ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ.
ಒಬ್ಬರು ಯಾವ ರಾಜ್ಯಕ್ಕೆ ಸೇರಿದವರು ಎಂಬುದು ತಿಳಿದುಬಂದಿಲ್ಲ. ಪಂಜಾಬಿನವರನ್ನು ವಿಮಾನದಲ್ಲಿ ಅಮೃತಸರಕ್ಕೆ ಕಳುಹಿಸಲಾಗಿದೆ.
ಪನಾಮಗೆ ಗಡಿಪಾರು ಮಾಡಲಾದ 299 ವಲಸಿಗರ ಪೈಕಿ ಭಾರತೀಯ ಪ್ರಜೆಗಳ ಸಂಖ್ಯೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಇವರನ್ನು ಕಳೆದ ವಾರ ಮೂರು ವಿಮಾನಗಳಲ್ಲಿ ಪನಾಮಗೆ ಕಳುಹಿಸಲಾಗಿತ್ತು. ಸದ್ಯ ಅಲ್ಲಿರುವ 299 ದಾಖಲೆಗಳಿಲ್ಲದ ವಲಸಿಗರ ಪೈಕಿ ಕೇವಲ 171 ಮಂದಿ ಮಾತ್ರ ತಮ್ಮ ತವರು ರಾಷ್ಟ್ರಗಳಿಗೆ ತೆರಳಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.