ತೆಲಂಗಾಣ: ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್‌ಎಲ್‌ಬಿಸಿ) ಸುರಂಗದ ಒಂದು ಭಾಗ ಕುಸಿದಿದ್ದು, ಅದರೊಳಗೆ ಸಿಲುಕಿರುವ ಎಂಟು ಕಾರ್ಮಿಕರನ್ನು ಹೊರತೆಗೆಯಲು ರಕ್ಷಣಾ ತಂಡಗಳು ಅವಿರತವಾಗಿ ಶ್ರಮಿಸುತ್ತಿವೆ.
ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ಸ್ಥಳೀಯ ತಂಡಗಳು 48 ಗಂಟೆಗಳಿಂದ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಎಂಟು ವ್ಯಕ್ತಿಗಳು ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ತೆಲಂಗಾಣ ಸಚಿವ ಜೂಪಲ್ಲಿ ಕೃಷ್ಣರಾವ್ ಹೇಳಿದ್ದಾರೆ. ಆದರೂ ಅವರು ಸಿಲುಕಿರುವ ಸ್ಥಳಕ್ಕೆ ತಲುಪಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಸುರಂಗದೊಳಗೆ ಸಿಲುಕಿರುವ ವ್ಯಕ್ತಿಗಳನ್ನು ರಕ್ಷಿಸಲು ಕನಿಷ್ಠ ಮೂರರಿಂದ ನಾಲ್ಕು ದಿನಗಳು ಬೇಕಾಗುತ್ತದೆ. ಏಕೆಂದರೆ ಕುಸಿತದ ಸ್ಥಳವು ಕೆಸರು ಮತ್ತು ಅವಶೇಷಗಳಿಂದ ತುಂಬಿದೆ. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ. ನಿಜ ಹೇಳಬೇಕೆಂದರೆ, ಅವರ ಬದುಕುಳಿಯುವ ಸಾಧ್ಯತೆಗಳು ತುಂಬಾ ಕಡಿಮೆಯಿದೆ.
ನಾನೇ ಸ್ವತ: ಸುರಂಗದ ಕೊನೆಯವರೆಗೂ ಹೋಗಿದ್ದೆ. ಅದು ದುರಂತದ ಸ್ಥಳದಿಂದ ಕೇವಲ 50 ಮೀಟರ್ ಕಡಿಮೆ ಇತ್ತು. ಅಲ್ಲಿ ಫೋಟೋಗಳನ್ನು ತೆಗೆದುಕೊಂಡಾಗ ಸುರಂಗದ ಕೊನೆ ಭಾಗ ಕಾಣಿಸುತ್ತಿತ್ತು. 9 ಮೀಟರ್ ವ್ಯಾಸದ ಸುರಂಗ, 30 ಅಡಿ ಉದ್ದ ಹೊಂದಿದ್ದು, 20 ಅಡಿಗಳವರೆಗೂ ಮಣ್ಣಿನ ರಾಶಿ ಬಿದ್ದಿದೆ. ನಾವು ಕಾರ್ಮಿಕರ ಹೆಸರನ್ನು ಕೂಗಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ, ಅವರು ಬದುಕುಳಿದಿರುವ ಸಾಧ್ಯತೆ ಇದ್ದಂತಿಲ್ಲ ಎಂದು ಅವರು ತಿಳಿಸಿದರು.
ಶನಿವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಸುರಂಗದೊಳಗೆ ಸಿಲುಕಿರುವ ವ್ಯಕ್ತಿಗಳಲ್ಲಿ ಇಬ್ಬರು ಎಂಜಿನಿಯರ್‌ಗಳು, ಇಬ್ಬರು ಆಪರೇಟರ್‌ಗಳು ಮತ್ತು ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಜಾರ್ಖಂಡ್‌ನ ನಾಲ್ವರು ಕಾರ್ಮಿಕರು ಸೇರಿದ್ದಾರೆ.
2023 ರಲ್ಲಿ ಉತ್ತರಕಾಶಿ ಸುರಂಗ ಕುಸಿತದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿದ ಉತ್ತರಾಖಂಡದ "RAT ಹೋಲ್ ಮೈನರ್ಸ್" ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಈ ತಂಡ ಸೀಮಿತ ಸ್ಥಳಗಳಲ್ಲಿ ಸಿಲುಕಿರುವವರನ್ನು ಪತ್ತೆ ಮಾಡುವ ಪರಿಣತಿಗೆ ಹೆಸರುವಾಸಿಯಾಗಿದೆ. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಬಲ ಬಂದಂತಾಗಿದೆ.
ಸೋಮವಾರ ಘಟನಾ ಸ್ಥಳಕ್ಕೆ ಆಗಮಿಸಿದ ನೌಕಾಪಡೆ ತಂಡಗಳು ಇನ್ನೂ ಸುರಂಗದೊಳಗೆ ಪ್ರವೇಶಿಸಿಲ್ಲ. ಅಲ್ಲದೇ ಐಐಟಿ ಚೆನ್ನೈನ ತಂಡವು ಕ್ಯಾಮೆರಾಗಳು ಮತ್ತು ಗಣಿ ಪತ್ತೆ ಮಾಡುವ ರೋಬೋಟ್ ತಂದು ಕಾರ್ಯಾಚರಣೆಗೆ ಸೇರಿಕೊಂಡಿದೆ. ಐಐಟಿ ಚೆನ್ನೈನ ಮೂವರು ಮತ್ತು ಎಲ್ & ಟಿಯ ಮೂವರು ತಜ್ಞರನ್ನು ಒಳಗೊಂಡ ಆರು ಸದಸ್ಯರ ತಂಡ ಉಪಕರಣಗಳ ಮೂಲಕ ನೇರ ದೃಶ್ಯಗಳನ್ನು ಸೆರೆಹಿಡಿಯಲಿವೆ.
ಕ್ಯಾಮೆರಾಗಳು ದುರಂತದ ಸ್ಥಳ ತಲುಪಲು ವಿಫಲವಾದರೆ, ಲ್ಯಾಪ್‌ಟಾಪ್‌ಗೆ ಸಂಪರ್ಕಗೊಂಡಿರುವ ರೋಬೋಟ್ ನಿಯೋಜಿಸಲಾಗುತ್ತದೆ. ಶೋಧ ಕಾರ್ಯದಲ್ಲಿ ನೆರವಾಗಲು AquaEye ಉಪಕರಣಗಳನ್ನು ಸಹ ಬಳಸಲಾಗುತ್ತಿದೆ. ವಿಪತ್ತು ನಿರ್ವಹಣಾ ವಿಶೇಷ ಮುಖ್ಯ ಕಾರ್ಯದರ್ಶಿ ಅರವಿಂದ್ ಕುಮಾರ್ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.