ನವದೆಹಲಿ: 1984ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಕೊಲೆ ಪ್ರಕರಣವೊಂದರಲ್ಲಿ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್ ಅವರಿಗೆ ದೆಹಲಿ ನ್ಯಾಯಾಲಯವೊಂದು ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ನವೆಂಬರ್ 1, 1984ರಲ್ಲಿ ಜಸ್ವಂತ್ ಸಿಂಗ್ ಹಾಗೂ ಅವರ ಮಗ ತರುಣ್ ದೀಪ್ ಸಿಂಗ್ ಅವರನ್ನು ಕೊಲೆ ಮಾಡಿದ ಆರೋಪದ ಮೇರೆಗೆ ವಿಶೇಷ ನ್ಯಾಯಾಧೀಶ ಕಾವೇರಿ ಬಾವೇಜಾ ಅವರು ಸಜ್ಜನ್ ಕುಮಾರ್ ಅವರಿಗೆ ಜೀವವಾಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು.
ಕುಮಾರ್ ಅವರಿಗೆ ಮರಣ ದಂಡನೆ ನೀಡಬೇಕೆಂದು ದೂರುದಾರರಾದ ಜಸ್ವಂತ ಸಿಂಗ್ ಪತ್ನಿ ಹಾಗೂ ಪ್ರಾಸಿಕ್ಯೂಷನ್ ಕೋರಿದ್ದರು. ಕೊಲೆ ಅಪರಾಧಕ್ಕೆ ಗರಿಷ್ಠ ಶಿಕ್ಷೆಯಾಗಿ ಮರಣ ದಂಡನೆ, ಕನಿಷ್ಠ ಶಿಕ್ಷೆಯಾಗಿ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ.
ಫೆಬ್ರವರಿ 12 ರಂದು ನ್ಯಾಯಾಲಯವು ಅಪರಾಧಕ್ಕಾಗಿ ಕುಮಾರ್‌ಗೆ ಶಿಕ್ಷೆ ವಿಧಿಸಿತ್ತು. ಅಲ್ಲದೇ ಸುಪ್ರೀಂ ಕೋರ್ಟ್ ಆದೇಶದ ದೃಷ್ಟಿಯಿಂದ ಅಪರಾಧಿಯ ಮನೋವೈದ್ಯಕೀಯ ಮತ್ತು ಮಾನಸಿಕ ಸ್ಥಿಮಿತತೆ ಕುರಿತು ತಿಹಾರ್ ಕೇಂದ್ರ ಕಾರಾಗೃಹದಿಂದ ವರದಿಯನ್ನು ಕೇಳಿತ್ತು. ಕುಮಾರ್ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ.