ಮುಂಬೈ: ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಜನರಲ್ಲಿ ಕಂಡುಬಂದಿರುವ ಹಠಾತ್ ಕೂದಲು ಉದುರುವಿಕೆ ಸಮಸ್ಯೆಯು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಪಂಜಾಬ್ ಮತ್ತು ಹರಿಯಾಣದಿಂದ ಪೂರೈಕೆಯಾದ ಗೋಧಿಯಲ್ಲಿ ಹೆಚ್ಚಿನ ಸೆಲೆನಿಯಮ್ ಅಂಶ ಕಂಡುಬಂದಿದ್ದು ಇದಕ್ಕೆ ಕಾರಣ ಎಂದು ವೈದ್ಯಕೀಯ ತಜ್ಞರ ವರದಿ ತಿಳಿಸಿದೆ.
ಸೆಲೆನಿಯಮ್ ಮಣ್ಣಿನಲ್ಲಿ ಕಂಡುಬರುವ ಖನಿಜವಾಗಿದ್ದು, ನೈಸರ್ಗಿಕವಾಗಿ ನೀರು ಮತ್ತು ಕೆಲವು ಆಹಾರಗಳಲ್ಲಿ ಕಂಡುಬರುತ್ತದೆ. ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸೆಲೆನಿಯಮ್ ಜನರ ಆರೋಗ್ಯಕ್ಕೆ ಬಹಳ ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತದೆ.
ಕಳೆದ ವರ್ಷ ಡಿಸೆಂಬರ್ ನಿಂದ ಈ ವರ್ಷದ ಜನವರಿವರೆಗೆ ಬುಲ್ದಾನಾದ 18 ಹಳ್ಳಿಗಳಲ್ಲಿ 279 ವ್ಯಕ್ತಿಗಳಲ್ಲಿ ಹಠಾತ್ ಕೂದಲು ಉದುರುವಿಕೆ ಮತ್ತು 'ತೀವ್ರವಾದ ಅಲೋಪೆಸಿಯಾ ಟೋಟಲಿಸ್' ಪ್ರಕರಣಗಳು ವರದಿಯಾಗಿದ್ದು, ಅಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು ಮತ್ತು ಯುವತಿಯರು ಸೇರಿದಂತೆ ಕೂದಲು ಉದುರುವ ಸಮಸ್ಯೆಗೆ ತುತ್ತಾದವರು ಶೈಕ್ಷಣಿಕ ಚಟುವಟಿಕೆಗಳು ಮತ್ತು ವಿವಾಹವಾಗಲು ಸಮಸ್ಯೆ ಎದುರಿಸಿದ ಪ್ರಸಂಗಗಳು ನಡೆದಿವೆ.
ಅಲೋಪೆಸಿಯಾ ಸುತ್ತಲಿನ ಸಾಮಾಜಿಕ ಕಳಂಕವು ಕೆಲವರು ಮುಜುಗರವನ್ನು ತಪ್ಪಿಸುವ ಪ್ರಯತ್ನದಲ್ಲಿ ತಮ್ಮ ನೆತ್ತಿಯನ್ನು ಬೋಳಿಸಿಕೊಳ್ಳಲು ಕಾರಣವಾಯಿತು. ತಲೆಕೂದಲು ಉದುರುವ ಸಮಸ್ಯೆಪೀಡಿತ ಪ್ರದೇಶಗಳಿಗೆ ತಲುಪಿ ಮಾದರಿ ಸಂಗ್ರಹಿಸಿದ ನಂತರ ಅಧಿಕಾರಿಗಳು ವ್ಯಕ್ತಿಗಳು, ಮುಖ್ಯವಾಗಿ ಯುವತಿಯರು, ತಲೆನೋವು, ಜ್ವರ, ನೆತ್ತಿಯ ತುರಿಕೆ, ಜುಮ್ಮೆನಿಸುವ ಅನುಭವ ಮತ್ತು ಕೆಲವು ಸಂದರ್ಭಗಳಲ್ಲಿ ವಾಂತಿಯಂತಹ ಲಕ್ಷಣಗಳನ್ನು ಹೊಂದಿರುವುದು ಕಂಡುಬಂದಿದೆ ಎಂದು ರಾಯಗಢದ ಬವಾಸ್ಕರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕಿ ಡಾ. ಹಿಮತ್ರಾವ್ ಬವಾಸ್ಕರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಸಾಂಕ್ರಾಮಿಕ ರೋಗಕ್ಕೆ ಪ್ರಾಥಮಿಕ ಕಾರಣ ಪಂಜಾಬ್ ಮತ್ತು ಹರಿಯಾಣದಿಂದ ಆಮದು ಮಾಡಿಕೊಂಡ ಗೋಧಿಯಾಗಿದ್ದು, ಇದು ಸ್ಥಳೀಯವಾಗಿ ಉತ್ಪಾದಿಸುವ ಗೋಧಿಗಿಂತ ಹೆಚ್ಚಿನ ಸೆಲೆನಿಯಮ್ ಅಂಶವನ್ನು ಹೊಂದಿದೆ ಎಂದು ಕಂಡುಬಂದಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯರು ತಿಳಿಸಿದ್ದಾರೆ.
ಪೀಡಿತ ಪ್ರದೇಶದ ಗೋಧಿಯಲ್ಲಿ ಸ್ಥಳೀಯವಾಗಿ ಬೆಳೆಯುವ ಗೋಧಿಗಿಂತ 600 ಪಟ್ಟು ಹೆಚ್ಚು ಸೆಲೆನಿಯಮ್ ನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ. ಈ ಹೆಚ್ಚಿನ ಸೆಲೆನಿಯಮ್ ಸೇವನೆಯು ಅಲೋಪೆಸಿಯಾ ಪ್ರಕರಣಗಳಿಗೆ ಕಾರಣವೆಂದು ಹೇಳಿದರು. ಜನರ ರಕ್ತ, ಮೂತ್ರ ಮತ್ತು ಕೂದಲಿನಲ್ಲಿ ಸೆಲೆನಿಯಮ್ ಮಟ್ಟದಲ್ಲಿ ಹೆಚ್ಚಳ ಕಂಡುಹಿಡಿದಿದೆ ಎಂದರು.
ರಕ್ತ, ಮೂತ್ರ ಮತ್ತು ಕೂದಲಿನ ಮಾದರಿಗಳಲ್ಲಿ ಕ್ರಮವಾಗಿ 35 ಪಟ್ಟು, 60 ಪಟ್ಟು ಮತ್ತು 150 ಪಟ್ಟು ಸೆಲೆನಿಯಮ್ ಅಂಶ ಹೆಚ್ಚಾಗಿದೆ ಎಂದು ತೋರಿಸಲಾಗಿದೆ ಎಂದು ಬವಾಸ್ಕರ್ ಹೇಳಿದರು. ಗೋಧಿಯನ್ನು ಮತ್ತಷ್ಟು ಪರೀಕ್ಷಿಸಿದಾಗ ಸೆಲೆನಿಯಮ್ ಅಂಶವು ಬಾಹ್ಯ ಮಾಲಿನ್ಯದ ಪರಿಣಾಮವಾಗಿಲ್ಲ ಆದರೆ ಧಾನ್ಯದಲ್ಲಿಯೇ ಅಂತರ್ಗತವಾಗಿರುತ್ತದೆ ಎಂದು ತಜ್ಞರು ಹೇಳಿದರು, ಪಂಜಾಬ್ ಮತ್ತು ಹರಿಯಾಣದ ಗೋಧಿಯಲ್ಲಿ ಹೆಚ್ಚಿನ ಸೆಲೆನಿಯಮ್ ಜೈವಿಕ ಲಭ್ಯತೆ ಇದೆ ಎಂದು ತಿಳಿದುಬಂದಿದೆ. ಆದರೆ ಈ ಗೋಧಿಗಳಲ್ಲಿ ಯಾವುದೇ ಮಾಲಿನ್ಯ ಕಂಡುಬಂದಿಲ್ಲ ಎಂದರು.
ತಡೆಗಟ್ಟುವ ಕ್ರಮವಾಗಿ ಸೆಲೆನಿಯಮ್-ಭರಿತ ಗೋಧಿಯ ಸೇವನೆಯನ್ನು ನಿಲ್ಲಿಸುವಂತೆ ಅಧಿಕಾರಿಗಳು ಜನರಿಗೆ ಸೂಚಿಸಿದ ನಂತರ ಕೆಲವರಲ್ಲಿ 5-6 ವಾರಗಳಲ್ಲಿ ಕೂದಲು ಭಾಗಶಃ ಮತ್ತೆ ಬೆಳೆದಿದೆ.