ಚಂಡೀಗಢ: ಪಂಜಾಬ್‌ನಲ್ಲಿ ಡ್ರಗ್ ಮಾಫಿಯಾ ನಿಭಾಯಿಸಲು ಸಿಎಂ ಭಗವಂತ್ ಮಾನ್ ಸರ್ಕಾರವು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಡೆಲ್ ಅಳವಡಿಸಿಕೊಂಡಿದೆ. ಮನ್ ಸರ್ಕಾರವು ಈಗ ಬುಲ್ಡೋಜರ್‌ಗಳನ್ನು ಬಳಸುತ್ತಿದೆ. ಸರ್ಕಾರ ಮಾದಕ ವ್ಯಸನದ ವಿರುದ್ಧ ಪ್ರಮುಖ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದ ಅಡಿಯಲ್ಲಿ ಲುಧಿಯಾನದ ತಲ್ವಾಂಡಿ ಗ್ರಾಮದಲ್ಲಿ ಡ್ರಗ್ಸ್ ಮಾಫಿಯಾದ ಅಕ್ರಮ ನಿರ್ಮಾಣದ ಮೇಲೆ ಬುಲ್ಡೋಜರ್ ನುಗ್ಗಿಸಿದ್ದರು. ಇದು ಡ್ರಗ್ ಮಾಫಿಯಾ ಸೋನು, ಕಳೆದ ಮೂರು ವರ್ಷಗಳಿಂದ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಆತನ ವಿರುದ್ಧ ಈಗಾಗಲೇ 6 ಪ್ರಕರಣಗಳು ದಾಖಲಾಗಿವೆ.
ಗುರುವಾರ ಪಟಿಯಾಲಾದ ರೋರಿ ಕುಟ್ ಮೊಹಲ್ಲಾ ಲಕ್ಕಡ್ ಮಂಡಿಯಲ್ಲಿರುವ ಮಾದಕವಸ್ತು ಪೆಡ್ಲರ್ ರಿಂಕಿಯ ಎರಡು ಅಂತಸ್ತಿನ ಮೂಲೆಯ ಮನೆಯನ್ನು ಪಂಜಾಬ್ ಪೊಲೀಸರು ಕೆಡವಿದರು. ಕಾರ್ಯಾಚರಣೆಯ ಸಮಯದಲ್ಲಿ ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ಮತ್ತು ಹಿರಿಯ ಅಧಿಕಾರಿಗಳ ತಂಡ ಸ್ಥಳದಲ್ಲಿ ಹಾಜರಿದ್ದರು. ಪೊಲೀಸರಿಗೆ ಅಗತ್ಯ ಆದೇಶಗಳಿದ್ದ ಕಾರಣ ಮನೆಯನ್ನು ಕೆಡವಲಾಯಿತು ಎಂದು ನಾನಕ್ ಸಿಂಗ್ ಹೇಳಿದರು. ರಿಂಕಿ ವಿರುದ್ಧ 2016 ರಿಂದ 2023 ರವರೆಗೆ ಎನ್‌ಡಿಪಿಎಸ್ ಕಾಯ್ದೆಯಡಿ ಒಟ್ಟು 10 ಎಫ್‌ಐಆರ್ ದಾಖಲಾಗಿವೆ. ರಿಂಕಿ ಈಗ ತಲೆಮರೆಸಿಕೊಂಡಿದ್ದಾಳೆ. ಈ ಹಿಂದೆ ಪೊಲೀಸರು ಅವಳನ್ನು ಸುಮಾರು ಹತ್ತು ಬಾರಿ ಬಂಧಿಸಿದ್ದರು ಎಂದು ಅವರು ಹೇಳಿದರು.
ಮಾದಕವಸ್ತು ವ್ಯಾಪಾರಿಗಳೊಂದಿಗಿನ ಸಂಬಂಧಕ್ಕೆ ಈ ಪ್ರದೇಶದಲ್ಲಿ ರಿಂಕಿ ಕುಖ್ಯಾತಿ ಪಡೆದಿದ್ದಳು. ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ತಪ್ಪಿಸಲು ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ನಾವು ಇಡೀ ಪ್ರಕರಣವನ್ನು ಪರಿಶೀಲಿಸಿದ್ದೇವೆ ಮತ್ತು ಮಾದಕವಸ್ತು ಮಾರಾಟದಿಂದ ಗಳಿಸಿದ ಹಣದಿಂದ ಮನೆಯನ್ನು ನಿರ್ಮಿಸಲಾಗಿದೆ ಎಂದು ಕಂಡುಬಂದಿದೆ ಎಂದು ಸಿಂಗ್ ಹೇಳಿದರು.
ಇದಕ್ಕೂ ಮುನ್ನ ಕಳೆದ ಸೋಮವಾರ ರಾಜ್ಯ ಸರ್ಕಾರವು ಮಾದಕವಸ್ತುಗಳ ವಿರುದ್ಧ ಕೈಗೊಂಡಿರುವ ಅಭಿಯಾನದ ಭಾಗವಾಗಿ, ಲಾಧೋವಾಲ್ ಬಳಿಯ ತಲ್ವಾಂಡಿ ಗ್ರಾಮದ ಸೋನು ಮತ್ತು ಲುಧಿಯಾನ ಜಿಲ್ಲೆಯ ದುಗ್ರಿಯ ಭಾಯಿ ಹಿಮ್ಮತ್ ಸಿಂಗ್ ನಗರದ ರಾಹುಲ್ ಹನ್ಸ್ ಎಂಬ ಇಬ್ಬರು ಮಾದಕವಸ್ತು ಕಳ್ಳಸಾಗಣೆದಾರರ ಮನೆಗಳನ್ನು ರಾಜ್ಯ ಪೊಲೀಸರು ಕೆಡವಿದ್ದರು.