ನವದೆಹಲಿ: ದೆಹಲಿ ವಿಧಾನಸಭೆಗೆ ಎಎಪಿ ಶಾಸಕಿ ಅತಿಶಿ ಅವರನ್ನು ವಿರೋಧ ಪಕ್ಷದ ನಾಯಕಿಯಾಗಿ (ಎಲ್‌ಒಪಿ) ದೆಹಲಿ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಅಧಿಕೃತ ಮುದ್ರೆ ಒತ್ತಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಅತಿಶಿಯನ್ನು ಗೌರವಾನ್ವಿತ ಸ್ಪೀಕರ್ ಗುರುತಿಸಿದ್ದಾರೆ ಎಂದು ವಿಧಾನಸಭೆಯ ಕಾರ್ಯದರ್ಶಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅತಿಶಿ ಸಿಎಂ ಆಗಿ ಆಯ್ಕೆಯಾಗಿದ್ದರು. ನಂತರ 2025ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕೇಜ್ರಿವಾಲ್ ಸೇರಿದಂತೆ ದೊಡ್ಡ ನಾಯಕರು ಸೋಲು ಕಂಡಿದ್ದರು. ಹೀಗಾಗಿ ಶಾಸಕಿಯಾಗಿ ಗೆದ್ದ ಅತಿಶಿ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು.
ಕಳೆದ ಮಂಗಳವಾರ ದೆಹಲಿ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಭಾಷಣದ ಸಮಯದಲ್ಲಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಫೆಬ್ರವರಿ 27 ರವರೆಗೆ 21 ಎಎಪಿ ಶಾಸಕರನ್ನು ವಿಧಾನಸಭೆಯ ಅಧಿವೇಶನದಿಂದ ಹೊರಹಾಕಿದರು. ಓಖ್ಲಾ ಶಾಸಕ ಅಮಾನತುಲ್ಲಾ ಖಾನ್ ಪ್ರತಿಭಟನೆಯ ಸಮಯದಲ್ಲಿ ಸದನದಲ್ಲಿ ಇಲ್ಲದ ಕಾರಣ ಅಮಾನತುಗೊಳಿಸುವಿಕೆಯಿಂದ ಪಾರಾದ ಏಕೈಕ ಎಎಪಿ ಶಾಸಕರಾಗಿದ್ದರು.
ಆದಾಗ್ಯೂ, ವಿರೋಧ ಪಕ್ಷದ ನಾಯಕ ಅತಿಶಿ ಮತ್ತು ಇತರ ಎಎಪಿ ಶಾಸಕರು ಇಂದು ವಿಧಾನಸಭೆಗೆ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಭದ್ರತಾ ಸಿಬ್ಬಂದಿ ಅವರನ್ನು ತಡೆದರು. ನಂತರ ಅವರು ಹೊರಗೆ ಧರಣಿ ನಡೆಸಿದ್ದು ವಿಪಕ್ಷ ನಾಯಕಿ ಅತಿಶಿ ರಾಷ್ಟ್ರಪತಿಗಳ ಭೇಟಿಗೆ ಪತ್ರ ಬರೆದಿದ್ದಾರೆ.