ಧಾರ್: ಭೋಪಾಲ್ ನ ಯೂನಿಯನ್ ಕಾರ್ಬೈಡ್‌ನಿಂದ 337 ಟನ್ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಡಲು ಯೋಜಿಸಿರುವುದನ್ನು ವಿರೋಧಿಸಿ ಶುಕ್ರವಾರ ಮಧ್ಯಪ್ರದೇಶದ ಪಿತಾಂಪುರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, 'ಪಿತಾಂಪುರ ಬಚಾವೋ ಸಮಿತಿ' ಆಯೋಜಿಸಿದ್ದ ಪ್ರತಿಭಟನೆ ವೇಳೆ ಇಬ್ಬರು ವ್ಯಕ್ತಿಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು. ತಕ್ಷಣ ಎಚ್ಚೆತ್ತ ಇತರ ಪ್ರತಿಭಟನಾಕಾರರು ಬೆಂಕಿಯನ್ನು ನಂದಿಸಿ, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ಸ್ಥಳೀಯ ಆಸ್ಪತ್ರೆಯಿಂದ ಇಂದೋರ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿರುವುದಾಗಿ ಧಾರ್ ಪೊಲೀಸ್ ಅಧೀಕ್ಷಕ ಮನೋಜ್ ಸಿಂಗ್ ಅವರು ಹೇಳಿದ್ದಾರೆ.
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಉದ್ವಿಗ್ನವಾಗಿದೆ ಎಂದು ಮನೋದ್ ಸಿಂಗ್ ಅವರು ಪಿತಾಂಪುರ ಬಸ್ ನಿಲ್ದಾಣದ ಬಳಿಯ ಪ್ರತಿಭಟನಾ ಸ್ಥಳದಿಂದ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದ್ದಾರೆ.
ಇಂದೋರ್‌ನಿಂದ ಸರಿಸುಮಾರು 30 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಟೌನ್‌ಶಿಪ್‌ಗೆ ಅಪಾಯಕಾರಿ ತ್ಯಾಜ್ಯ ವಿಲೇವಾರಿಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬುಧವಾರ ವೈಜ್ಞಾನಿಕ ವಿಲೇವಾರಿಗಾಗಿ 12 ಕಂಟೇನರ್‌ಗಳಲ್ಲಿ ಧಾರ್ ಜಿಲ್ಲೆಯ ಪಿತಾಂಪುರಕ್ಕೆ ತಾಜ್ಯವನ್ನು ತರಲಾಗಿತ್ತು. ಆದರೆ ಸ್ಥಳೀಯರು, ಪರಿಸರಕ್ಕೆ ಹಾನಿಯುಂಟುಮಾಡುವ ತ್ಯಾಜ್ಯವನ್ನು ಯೋಜಿತವಾಗಿ ದಹಿಸುವುದನ್ನು ವಿರೋಧಿಸಿ ‘ಪಿತಾಂಪುರ ಬಚಾವೋ ಸಮಿತಿ’ಯ ಬ್ಯಾನರ್ ಅಡಿಯಲ್ಲಿ ಇಂದು ಬಂದ್‌ಗೆ ಕರೆ ನೀಡಿದ್ದರು.
ಬಂದ್ ವೇಳೆ ಪಟ್ಟಣದ ಹಲವು ಭಾಗಗಳಲ್ಲಿ ದಿನವಿಡೀ ಪ್ರತಿಭಟನೆ ಮುಂದುವರಿದಿದ್ದು, ಕೆಲವು ಪ್ರತಿಭಟನಾಕಾರರು ಪ್ರಮುಖ ರಸ್ತೆಯನ್ನು ತಡೆದ ನಂತರ ಅವರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು.
ಪಿತಾಂಪುರವು ಸುಮಾರು 1.75 ಲಕ್ಷ ಜನಸಂಖ್ಯೆಯನ್ನು ಹೊಂದಿದೆ ಮತ್ತು ಅದರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 700 ಕಾರ್ಖಾನೆಗಳಿವೆ. “ಆತಂಕ ಪಡುವ ಅಗತ್ಯವಿಲ್ಲ” ಎಂದು ಧಾರ್ ಕಲೆಕ್ಟರ್ ಪ್ರಿಯಾಂಕ್ ಮಿಶ್ರಾ ನಿವಾಸಿಗಳಿಗೆ ಭರವಸೆ ನೀಡಿದರು.