ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ BJP ನಾಯಕ ಹಾಗೂ ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ Ramesh Bidhuri ವಿರುದ್ಧ ಕಾಂಗ್ರೆಸ್ ನಾಯಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು.. ದೆಹಲಿ ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ನಾಯಕರ ನಡುವಿನ ವಾಕ್ಸಮರಗಳ ನಡುವೆಯೇ ಕೆಲ ನಾಯಕರು ನಾಲಗೆ ಹರಿಬಿಟ್ಟು ವಿವಾದಕ್ಕೀಡಾಗುತ್ತಿದ್ದಾರೆ. ಈ ಪಟ್ಟಿಗೆ ಇದೀಗ ಬಿಜೆಪಿ ನಾಯಕ ಹಾಗೂ ದಕ್ಷಿಣ ದೆಹಲಿಯ ಕಲ್ಕಾಜಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಸೇರ್ಪಡೆಯಾಗಿದ್ದಾರೆ.
ಈ ಹಿಂದೆ ತಮ್ಮ ಕ್ಷೇತ್ರದಲ್ಲಿ ಚುನಾವಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ರಮೇಶ್ ಬಿಧುರಿ, 'ಕಲ್ಕಾಜಿಯ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿಯ ಕೆನ್ನೆಯಂತೆ ಮಾಡುತ್ತೇವೆ' ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಈ ಮೊದಲು ಹಲವು ಬಾರಿ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗಿದ್ದ ರಮೇಶ್ ಬಿಧುರಿ ಇದೀಗ ಮತ್ತೆ ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರನ್ನು ಎಳೆದು ತರುವ ಮೂಲಕ ಮತ್ತೆ ವಿವಾದಕ್ಕೀಡಾಗಿದ್ದಾರೆ.
ಕಾಂಗ್ರೆಸ್ ಆಕ್ರೋಶ
ಇನ್ನು ರಮೇಶ್ ಬಿಧುರಿ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಮೇಶ್ ಬಿಧುರಿ ಹೇಳಿಕೆ ಇದೀಗ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ಮಹಿಳಾ ವಿರೋಧಿ, ಬಿಧುರಿ ಅವರ ಹೇಳಿಕೆ ನಾಚಿಕೆಗೇಡಿನ ಸಂಗತಿಯಾಗಿದೆ, ಇದು ಸ್ತ್ರೀದ್ವೇಷ ಮನೋಭಾವದ ಪ್ರತಿಬಿಂಬವಾಗಿದೆ ಎಂದು ಎಎಪಿ ಹೇಳಿದೆ. ಕಾಂಗ್ರೆಸ್ ಕೂಡ ಬಿಧುರಿಯವರ ಕ್ಷಮೆಯಾಚನೆಗೆ ಒತ್ತಾಯಿಸಿದ್ದು, ಇಂತಹ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ಮೌನವನ್ನು ಪ್ರಶ್ನಿಸಿದೆ.
"ಬಿಜೆಪಿ ಮಹಿಳಾ ವಿರೋಧಿ. ಪ್ರಿಯಾಂಕಾ ಗಾಂಧಿಯವರ ಬಗ್ಗೆ ರಮೇಶ್ ಬಿಧುರಿ ಅವರ ಹೇಳಿಕೆ ನಾಚಿಕೆಗೇಡಿನ ಸಂಗತಿ ಮಾತ್ರವಲ್ಲದೆ ಮಹಿಳೆಯರ ಬಗ್ಗೆ ಅವರ ಅಸಹ್ಯಕರ ಮನಸ್ಥಿತಿಯನ್ನು ತೋರಿಸುತ್ತದೆ. ಆದರೆ ಸದನದಲ್ಲಿ ತನ್ನ ಸಹ ಸಂಸದರ ವಿರುದ್ಧ ಅಸಭ್ಯ ಭಾಷೆ ಬಳಸಿ ಯಾವುದೇ ಶಿಕ್ಷೆಯನ್ನು ಪಡೆಯದ ವ್ಯಕ್ತಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಇದು ಬಿಜೆಪಿಯ ನಿಜವಾದ ಮುಖ" ಎಂದು ಕಾಂಗ್ರೆಸ್ ನಾಯಕಿ Supriya Shrinate ಹೇಳಿದ್ದಾರೆ.
ವಿವಾದವಾಗುತ್ತಲೇ ಸ್ಪಷ್ಟನೆ ನೀಡಿದ ನಾಯಕ
ಇನ್ನು ತಮ್ಮ ಹೇಳಿಕೆ ವ್ಯಾಪಕ ವಿರೋಧಕ್ಕೆ ತುತ್ತಾಗುತ್ತಲೇ ಈ ಕುರಿತು ಸ್ಪಷ್ಟನೆ ನೀಡಿರುವ ಬಿಜೆಪಿ ನಾಯಕ ರಮೇಶ್ ಬಿಧುರಿ, ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿ ಅವರ ಕೆನ್ನೆಗೆ ಹೋಲಿಸಿದ ಲಾಲು ಪ್ರಸಾದ್ ಯಾದವ್ ಅವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಈ ಹೇಳಿಕೆಯು ಕಾಂಗ್ರೆಸ್ ಗೆ ನೋವುಂಟು ಮಾಡಿದ್ದರೆ, ಸಮಾಜವನ್ನು ಪ್ರತಿಬಿಂಬಿಸುವ ತನ್ನ ಕೆಲಸದ ಮೂಲಕ ಭಾರತಕ್ಕೆ ಹೆಮ್ಮೆ ತಂದ ಗೌರವಾನ್ವಿತ ನಟಿ ಹೇಮಾ ಮಾಲಿನಿ ಅವರನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಅಲ್ಲದೆ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, 'ಕೆಲವು ಸಂದರ್ಭಗಳಲ್ಲಿ ನಾನು ನೀಡಿದ ಹೇಳಿಕೆಯ ಆಧಾರದ ಮೇಲೆ ತಪ್ಪು ಗ್ರಹಿಕೆಯೊಂದಿಗೆ ರಾಜಕೀಯ ಲಾಭಕ್ಕಾಗಿ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾರನ್ನೂ ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ಹೇಳಿದ್ದಾರೆ.
ಅಂದಹಾಗೆ ಬಿಜೆಪಿ ನಾಯಕ ರಮೇಶ್ ಬಿಧುರಿ ವಿವಾದಾತ್ಮಕ ಹೇಳಿಕೆ ಇದೇ ಮೊದಲೇನಲ್ಲ.. ಈ ಹಿಂದೆ 2023 ರಲ್ಲಿ, ಅವರು ಲೋಕಸಭಾ ಅಧಿವೇಶನದಲ್ಲಿ ಆಗಿನ ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ವಿರುದ್ಧ ಕೋಮುವಾದಿ ಹೇಳಿಕೆಗಳನ್ನು ನೀಡಿದರು. ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಈ ಹೇಳಿಕೆಗಳು ಸಂಸದೀಯ ಸದಸ್ಯರಿಗೆ ಸೂಕ್ತವಲ್ಲ ಎಂದು ರಾಜಕೀಯ ನಾಯಕರಿಂದ ವ್ಯಾಪಕವಾಗಿ ಟೀಕಿಸಲ್ಪಟ್ಟವು.