ಶಹದೋಲ್: ಮಧ್ಯಪ್ರದೇಶದ ಮಹಿಳಾ DIG ಯೊಬ್ಬರು ಹದಿಹರೆಯದ ಶಾಲಾ ವಿದ್ಯಾರ್ಥಿಗಳಿಗೆ "ಒಜಸ್ವಿ" (ಚುರುಕುತನದ) ಮಕ್ಕಳನ್ನು ಹೆರಲು ಮಾಡಬೇಕಾದ ಮತ್ತು ಮಾಡಬಾರದ ಬಗ್ಗೆ ಸಲಹೆ ನೀಡುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ. ಇದರಲ್ಲಿ ಹುಣ್ಣಿಮೆಯ ರಾತ್ರಿ ಗರ್ಭ ಧರಿಸಬಾರದು ಎಂದು ಹೇಳುವುದು ವಿಡಿಯೋದಲ್ಲಿದೆ.
ಹೆಣ್ಣು ಮಕ್ಕಳ ಸುರಕ್ಷತೆಗಾಗಿ ರಾಜ್ಯ ಸರ್ಕಾರದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 4 ರಂದು ಖಾಸಗಿ ಶಾಲೆಯೊಂದರಲ್ಲಿ 10 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಹದೋಲ್ ಡಿಐಜಿ ಸವಿತಾ ಸೋಹಾನೆ ಉಪನ್ಯಾಸ ನೀಡಿದ್ದಾರೆ. ಕಳೆದೆರಡು ದಿನಗಳಿಂದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ.
'ನೀವು ಭೂಮಿಯ ಮೇಲೆ ಹೊಸ ಪೀಳಿಗೆಯನ್ನು ತರುತ್ತೀರಿ. ಅದಕ್ಕೆ ಹೇಗೆ ಹೋಗ್ತೀರಿ ಎಂದು ಅವಿವಾಹಿತರಾಗಿರುವ ಡಿಐಜಿ ಹೇಳುವುದು ಕೇಳಿಸುತ್ತದೆ. ಬಳಿಕ ಅದಕ್ಕೆ ಪ್ಲಾನ್ ಮಾಡ್ಬೇಕು. ಮೊದಲಿಗೆ ಪೂರ್ಣಿಮೆಯಂದು ಗರ್ಭಧರಿಸಬಾರದು. ಚುರುಕುತನದ ಮಕ್ಕಳನ್ನು ಹುಟ್ಟಿಸಲು ಸೂರ್ಯನ ಮುಂದೆ ನಮಸ್ಕರಿಸಿ ಮತ್ತು ನೀರನ್ನು ಅರ್ಪಿಸಿ ನಮಸ್ಕಾರ ಮಾಡಿ ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆ ಕುರಿತು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಪ್ರತಿಕ್ರಿಯಿಸಿದ DIG, ಧರ್ಮಗ್ರಂಥ ಓದಲು, ಹಿಂದೂ ಆಧ್ಯಾತ್ಮಿಕ ನಾಯಕರ ಧರ್ಮೋಪದೇಶ ಕೇಳಲು ಮತ್ತು ಉಪನ್ಯಾಸಗಳನ್ನು ನೀಡಲು ಇಷ್ಟಪಡುತ್ತೇನೆ. ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವ ಮತ್ತು ಹೆಣ್ಣು ಮಗುವಿನ ಗೌರವವನ್ನು ಉತ್ತೇಜಿಸುವ ಉದ್ದೇಶದಿಂದ ಅವರು "ಮೈ ಹೂಂ ಅಭಿಮನ್ಯು" ಕಾರ್ಯಕ್ರಮದಲ್ಲಿ ಮಾತನಾಡಿರುವುದಾಗಿ ತಿಳಿಸಿದರು.
ಪ್ರತಿ ತಿಂಗಳು ಶಾಲೆಯಲ್ಲಿ ಉಪನ್ಯಾಸ ನೀಡುತ್ತೇನೆ. 31 ವರ್ಷಗಳ ಹಿಂದೆ ಪೊಲೀಸ್ ಸೇವೆಗೆ ಸೇರುವ ಮೊದಲು, ನಾಲ್ಕು ವರ್ಷಗಳ ಕಾಲ ಸಾಗರ ಜಿಲ್ಲೆಯ ಸರ್ಕಾರಿ ಅಂತರ ಕಾಲೇಜು ಶಾಲೆಯಲ್ಲಿ ಉಪನ್ಯಾಸಕಿಯಾಗಿದ್ದೆ. ಆಧ್ಯಾತ್ಮಿಕ ಆನಂದಕ್ಕಾಗಿ ಮಾತನಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಹುಣ್ಣಿಮೆಯ ರಾತ್ರಿಯಲ್ಲಿ ಗರ್ಭಧಾರಣೆಯನ್ನು ತಪ್ಪಿಸುವ ಬಗ್ಗೆ ಅವರ ಸಲಹೆಯಂತೆ, ಹಿಂದೂ ಧರ್ಮದಲ್ಲಿ ಇದನ್ನು ಪವಿತ್ರ ಅವಧಿ ಎಂದು ಪರಿಗಣಿಸಲಾಗುತ್ತದೆ. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಅವರ ಉಪನ್ಯಾಸದ ಉದ್ದೇಶವು ಮಹಿಳೆಯರು ಮತ್ತು ಯುವತಿಯರ ಮೇಲಿನ ಭೀಕರ ಅಪರಾಧಗಳ ನಡುವೆ ಹೆಣ್ಣು ಮಗುವಿಗೆ ಗೌರವವನ್ನು ಮೂಡಿಸುವುದಾಗಿದೆ. ಆದರೆ ಉಪನ್ಯಾಸದ ಒಂದು ಭಾಗ ಮಾತ್ರ ವೈರಲ್ ಆಗಿದ್ದು, ಉಳಿದ ಅಂಶ ನಾಪತ್ತೆಯಾಗಿದೆ ಎಂದು DIG ಹೇಳಿದ್ದಾರೆ.