ಹೈದರಾಬಾದ್: ಪುಷ್ಪ 2 ಕಾಲ್ತುಳಿತ ಪ್ರಕರಣದಲ್ಲಿ ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಸ್ಥಳೀಯ ನ್ಯಾಯಾಲಯವೊಂದು ಅವರ ಜಾಮೀನಿನ ಷರತ್ತನ್ನು ಸಡಿಲಗೊಳಿಸಿದ್ದು, ಪ್ರತಿ ಭಾನುವಾರ ತನಿಖಾಧಿಕಾರಿ ಮುಂದೆ ಹಾಜರಾಗುವುದರಿಂದ ವಿನಾಯಿತಿ ನೀಡಿದೆ.
ಅಗತ್ಯವಿದ್ದಾಗ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಮುಂದೆ ಹಾಜರಾಗಬೇಕು ಎಂಬ ಷರತ್ತಿನೊಂದಿಗೆ ನಿರ್ದಿಷ್ಟ ದೇಶಗಳಿಗೆ ವಿದೇಶ ಪ್ರಯಾಣಕ್ಕೆ ನ್ಯಾಯಾಲಯ ಅವರಿಗೆ ಅನುಮತಿ ನೀಡಿದೆ.
ಪ್ರತಿ ಟ್ರಿಪ್‌ಗೆ ಅವರ ಪ್ರಯಾಣದ ವೇಳಾಪಟ್ಟಿಯನ್ನು SHO ಗೆ ತಿಳಿಸಲು ಮತ್ತು ಚಾರ್ಜ್ ಶೀಟ್ ಸಲ್ಲಿಸುವವರೆಗೆ ವಿದೇಶದಲ್ಲಿ ಅವರು ತಂಗಿರುವ ಸ್ಥಳದ ವಿವರಗಳನ್ನು ಒದಗಿಸುವಂತೆ ನಿರ್ದೇಶಿಸಲಾಗಿದೆ. ಉಳಿದ ಜಾಮೀನು ಷರತ್ತುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ನ್ಯಾಯಾಲಯ ಶುಕ್ರವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಅಲ್ಲು ಅರ್ಜುನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಜನವರಿ 3 ರಂದು ಅಲ್ಲು ಅರ್ಜುನ್‌ಗೆ ನಿಯಮಿತ ಜಾಮೀನು ನೀಡುವಾಗ ಪ್ರತಿ ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ನಡುವೆ ಎರಡು ತಿಂಗಳವರೆಗೆ ಅಥವಾ ಚಾರ್ಜ್‌ಶೀಟ್ ಸಲ್ಲಿಕೆಯಾಗುವವರೆಗೆ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು.
ಕೋರ್ಟ್ ಅನುಮತಿ ಪಡೆಯದೆ ದೇಶ ತೊರೆಯದಂತೆ ನಿರ್ಬಂಧಿಸಿತ್ತು. ಅಲ್ಲದೇ ತನಿಖೆಗೆ ಸಹಕರಿಸುವಂತೆ ಮತ್ತು ತನಿಖೆಯಲ್ಲಿ ಮಧ್ಯಪ್ರವೇಶಿಸುವುದು ಅಥವಾ ಯಾವುದೇ ರೀತಿಯಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದನ್ನು ತಡೆಯುವಂತೆ ನ್ಯಾಯಾಲಯ ನಿರ್ದೇಶಿಸಿತ್ತು.