ನವದೆಹಲಿ: ಚುನಾವಣೆಯಾಗಲಿ ಅಥವಾ ದೇಣಿಗೆಯಾಗಲಿ, ಬಿಜೆಪಿಯನ್ನು ಮೀರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ತನ್ನ ಹೆಚ್ಚಳದಿಂದ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಹೌದು, 2024ರ ಲೋಕಸಭಾ ಚುನಾವಣೆಗೆ ಮೊದಲು, ಬಿಜೆಪಿ ಪಡೆದ ದೇಣಿಗೆಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 83ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಬಿಜೆಪಿ ಒಟ್ಟು 4,340 ಕೋಟಿ ರೂ. ದೇಣಿಗೆ ಪಡೆದಿದೆ. ಅದೇ ಸಮಯದಲ್ಲಿ, ಪಕ್ಷಕ್ಕೆ ಬಂದ ಒಟ್ಟು ದೇಣಿಗೆಗಳಲ್ಲಿ ಚುನಾವಣಾ ಬಾಂಡ್‌ಗಳ ಪಾಲು ಅರ್ಧಕ್ಕಿಂತ ಕಡಿಮೆಯಾಗಿದೆ. 2023-24ನೇ ಸಾಲಿನ ಬಿಜೆಪಿಯ ಲೆಕ್ಕಪರಿಶೋಧನಾ ವರದಿಯಿಂದ ಈ ಮಾಹಿತಿ ಬೆಳಕಿಗೆ ಬಂದಿದೆ.
ಚುನಾವಣಾ ಆಯೋಗ ಸೋಮವಾರ ಬಿಡುಗಡೆ ಮಾಡಿದ ವಾರ್ಷಿಕ ವರದಿಯ ಪ್ರಕಾರ, 2022-23ರಲ್ಲಿ ಭಾರತೀಯ ಜನತಾ ಪಕ್ಷವು 2,120.06 ಕೋಟಿ ರೂ. ಮೌಲ್ಯದ ದೇಣಿಗೆಯನ್ನು ಪಡೆದಿದೆ. ಆದರೆ, 2023-24ರಲ್ಲಿ ಅದು 4,340 ಕೋಟಿ ರೂ.ಗೆ ಏರಿದೆ. ವರದಿಯ ಪ್ರಕಾರ, ಬಿಜೆಪಿ ಚುನಾವಣಾ ಬಾಂಡ್‌ಗಳ ರೂಪದಲ್ಲಿ 1,685.62 ಕೋಟಿ ರೂ.ಗಳನ್ನು ಪಡೆದಿದ್ದು, ಇದು ಅದರ ಒಟ್ಟು ದೇಣಿಗೆಯ 43% ಆಗಿದೆ. 2022-23ನೇ ಸಾಲಿನಲ್ಲಿ ಪಕ್ಷವು ಚುನಾವಣಾ ಬಾಂಡ್‌ಗಳ ರೂಪದಲ್ಲಿ 1294.14 ಕೋಟಿ ರೂ.ಗಳನ್ನು ಪಡೆದುಕೊಂಡಿದ್ದು, ಇದು ಒಟ್ಟು ದೇಣಿಗೆಯ 61% ರಷ್ಟಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಪರಿಗಣಿಸಿ ರದ್ದುಗೊಳಿಸಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕಾಗಿದೆ.
ಲೋಕಸಭಾ ಚುನಾವಣೆಯ ವರ್ಷವಾಗಿರುವುದರಿಂದ, ನಿರೀಕ್ಷೆಯಂತೆ, ಚುನಾವಣಾ/ಸಾಮಾನ್ಯ ಪ್ರಚಾರಕ್ಕಾಗಿ ಬಿಜೆಪಿಯ ಖರ್ಚು ಕಳೆದ ವರ್ಷ 1,092.15 ಕೋಟಿ ರೂ.ಗಳಿಂದ 1,754.06 ಕೋಟಿ ರೂ.ಗಳಿಗೆ ಏರಿದೆ. ವರದಿಯ ಪ್ರಕಾರ, ಜಾಹೀರಾತು ಮತ್ತು ಪ್ರಚಾರಕ್ಕಾಗಿ 591.39 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ.
ದೇಣಿಗೆ ವಿಷಯದಲ್ಲಿ, ಬಿಜೆಪಿ ನಂತರ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ಆದಾಗ್ಯೂ, ಚುನಾವಣಾ ವರ್ಷದಲ್ಲಿ ದೇಣಿಗೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. 2022-23ರಲ್ಲಿ 268.62 ಕೋಟಿ ರೂ.ಗಳಿಂದ ಪಕ್ಷಕ್ಕೆ ಬಂದ ದೇಣಿಗೆ ಶೇ. 170ರಷ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್‌ನ ವಾರ್ಷಿಕ ವರದಿ ತೋರಿಸಿದೆ. ಅಂದರೆ 2023-24ನೇ ಸಾಲಿನಲ್ಲಿ ಕಾಂಗ್ರೆಸ್ ಪಕ್ಷವು 1,129.66 ಕೋಟಿ ರೂ.ಗಳನ್ನು ಪಡೆದಿದೆ. ಕಾಂಗ್ರೆಸ್ ಸ್ವೀಕರಿಸಿದ ಒಟ್ಟು ದೇಣಿಗೆಗಳಲ್ಲಿ 73% ಅಂದರೆ 828.36 ಕೋಟಿ ರೂ.ಗಳನ್ನು ಚುನಾವಣಾ ಬಾಂಡ್‌ಗಳ ಮೂಲಕ ಸ್ವೀಕರಿಸಲಾಗಿದೆ. 2022-23ರಲ್ಲಿ ಈ ಪ್ರಮಾಣ 171.02 ಕೋಟಿ ರೂ.ಗಳಷ್ಟಿತ್ತು. ಕಾಂಗ್ರೆಸ್ ಚುನಾವಣಾ ವೆಚ್ಚ ಕಳೆದ ವರ್ಷ 192.55 ಕೋಟಿ ರೂ.ಗಳಿಂದ 619.67 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.
ಟಿಎಂಸಿಗೆ ಎಷ್ಟು ದೇಣಿಗೆ?
ಕಳೆದ ವಾರ ಚುನಾವಣಾ ಆಯೋಗ ಪ್ರಕಟಿಸಿದ 2023-24ರ ಟಿಎಂಸಿ ವಾರ್ಷಿಕ ಲೆಕ್ಕಪರಿಶೋಧನಾ ವರದಿಯ ಪ್ರಕಾರ, ಪಕ್ಷದ ಆದಾಯವು ಕಳೆದ ವರ್ಷ 333.46 ಕೋಟಿ ರೂ.ಗಳಿಂದ 646.39 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಅದರ ಆದಾಯದ ಸುಮಾರು 95% ಚುನಾವಣಾ ಬಾಂಡ್‌ಗಳಿಂದ ಬಂದಿದೆ.