ಚೆನ್ನೈ: 'ಪಾತ್ರಗಳನ್ನು ಮನೆಗೆ ಒಯ್ಯುವುದು ನಮ್ಮ ವೈಯಕ್ತಿಕ ಜೀವನವನ್ನು ಅಡ್ಡಿಪಡಿಸುತ್ತದೆ. ಹೀಗಾಗಿ ಚಿತ್ರೀಕರಣದ ಕೊನೆಯಲ್ಲಿ ತಮ್ಮ ಪಾತ್ರಗಳನ್ನು ಬಿಟ್ಟು ಹೋಗುವಂತೆ ನಿರ್ದೇಶಕ ಸೆಲ್ವರಾಘವನ್ ಅವರು ಹೇಳಿದ್ದರು. ನಾನು ಈಗಲೂ ಅವರ ಸಲಹೆಯನ್ನು ಅನುಸರಿಸುತ್ತೇನೆ' ಎಂದು ಮೇಯಗಳನ್ ಚಿತ್ರದ ನಟ ಕಾರ್ತಿ ಸೋಮವಾರ ತಿಳಿಸಿದ್ದಾರೆ.
ಚೆನ್ನೈನ ThinkEdu Conclave ನಲ್ಲಿ ನಡೆದ ‘What Lies Beneath: Getting into Character’ ಕುರಿತು ನಡೆದ ಚರ್ಚೆಯಲ್ಲಿ ಹಿರಿಯ ಪತ್ರಕರ್ತೆ ಕಾವೇರಿ ಬಾಮ್‌ಜಾಯ್ ಅವರೊಂದಿಗೆ ಮಾತನಾಡಿದ ನಟ, 'ನನ್ನ ಮೊದಲ ಸಿನಿಮಾ ಪರುತಿವೀರನ್ (2007) ಕ್ಲೈಮ್ಯಾಕ್ಸ್‌ನಲ್ಲಿ ನಾಯಕನ ಪ್ರೇಮಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತದೆ. ಇದು ಮಾನಸಿಕವಾಗಿ ನನ್ನ ಮೇಲೆ ಎಷ್ಟು ಪರಿಣಾಮ ಬೀರಿತೆಂದರೆ ನಾನು ಮೂರು ತಿಂಗಳು ಪ್ರತಿದಿನ ಅಳುತ್ತಿದ್ದೆ. ಅದೃಷ್ಟವಶಾತ್, ಆಯಿರಾತಿಲ್ ಒರುವನ್ (2010) ಸೆಟ್‌ನಲ್ಲಿ ಸೆಲ್ವರಾಘವನ್ ಸರ್ ನನ್ನ ತಯಾರಿಯನ್ನು ನೋಡಿದರು ಮತ್ತು 'ಆ್ಯಕ್ಷನ್'ಗೂ ಮೊದಲು ಮತ್ತು 'ಕಟ್' ನಂತರ ಪಾತ್ರದಲ್ಲಿ ಉಳಿಯಬೇಡಿ ಎಂದು ನನಗೆ ಸಲಹೆ ನೀಡಿದರು' ಎಂದರು.
ಮೇಯಗಳನ್ (2024) ಚಿತ್ರವು ಪ್ರಪಂಚವನ್ನು ಸಂಪರ್ಕಿಸಲು ಹೇಗೆ ಸಹಾಯ ಮಾಡಿತು ಎಂಬುದರ ಕುರಿತು ಮಾತನಾಡಿದ ಕಾರ್ತಿ, ಚಿತ್ರದ ಪಾತ್ರಕ್ಕಾಗಿ ತಾನು ತಯಾರಿ ನಡೆಸಬೇಕಿರಲಿಲ್ಲ. ಏಕೆಂದರೆ, ಅದು ನನ್ನ ಕಂಫರ್ಟ್ ಝೋನ್ ಆಗಿತ್ತು. ಚಿತ್ರದಲ್ಲಿರುವಂತಹ ಜನರನ್ನು ನಾನು ನಿಜಜೀವನದಲ್ಲಿ ಭೇಟಿ ಮಾಡಿದ್ದೇನೆ' ಎಂದು ತಿಳಿಸಿದರು.
ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್'ನಲ್ಲಿನ ವಂದಿಯತೇವನ ಪಾತ್ರವು ಮೊದಲ ಬಾರಿಗೆ ನನ್ನ ವೃತ್ತಿಜೀವನದ ಬಗ್ಗೆ ನನ್ನ ತಾಯಿ ಉತ್ಸುಕರಾಗಿರುವಂತೆ ಮಾಡಿತು. 'ರೊಮ್ಯಾನ್ಸ್‌ಗೆ ಸಂಬಂಧಿಸಿದಂತೆ, ಮಣಿರತ್ನಂ ಸರ್ ಅದನ್ನು ನೋಡಿಕೊಳ್ಳುತ್ತಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ನಾನು ಐಶ್ವರ್ಯಾ ರೈ ಅವರಂತಹ ಅಪ್ರತಿಮ ನಟಿಯನ್ನು ಒಳಗೊಂಡಿರುವ ಸಿನಿಮಾದಲ್ಲಿ ನಟಿಸುವುದು ಮತ್ತು ಚಿತ್ರದಲ್ಲಿ ಅವರಿಗೆ ಪ್ರಪೋಸ್ ಮಾಡಿದ್ದು ಕನಸಿನಂತೆ ಭಾಸವಾಗುತ್ತದೆ' ಎಂದು ಹೇಳುತ್ತಾರೆ.
ಅಭಿಮಾನಿಗಳಿಂದ ಸಿಗುತ್ತಿರುವ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ ಕಾರ್ತಿ, ಇತರ ಕ್ಷೇತ್ರಗಳಲ್ಲಿನ ಸಾಧಕರಿಗೆ ಮನ್ನಣೆಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. 'ನಮ್ಮ ಉಜವನ್ ಫೌಂಡೇಶನ್‌ನ ಕಾರ್ಯಕ್ರಮವೊಂದರಲ್ಲಿ ಹೆಚ್ಚು ಸಾಧನೆ ಮಾಡಿದ ಜನರನ್ನು ಗುರುತಿಸದೆ ಹೋಗುವಾಗ ನಾನು ಜನರಿಂದ ಚಪ್ಪಾಳೆ ಸ್ವೀಕರಿಸಲು ನನಗೆ ಮುಜುಗರವಾಯಿತು. ಪ್ರತಿಷ್ಠಾನದ ಮೂಲಕ ನಾವು ಜಲಮೂಲಗಳ ಪುನಃಸ್ಥಾಪನೆ ಮತ್ತು ಕೃಷಿಯ ಮೂಲಕ ವಿಧವೆಯರನ್ನು ಸಬಲೀಕರಣಗೊಳಿಸುವಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಸರ್ದಾರ್‌ನ ಮುಂಬರುವ ಭಾಗದ ಕುರಿತು ಮಾಹಿತಿ ಹಂಚಿಕೊಂಡ ನಟ, ಸರ್ದಾರ್ 2 ಚಿತ್ರವು ಪ್ರೀಕ್ವೆಲ್ ಮತ್ತು ಸೀಕ್ವೆಲ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದರು.