ಮುಂಬೈ: PES ಕಾಲೇಜಿನಲ್ಲಿ ಹಿಜಾಬ್ (Hijab) ಧರಿಸಲು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅವಕಾಶ ನೀಡದ ಕಾರಣ ಪ್ರಾಂಶುಪಾಲರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪದ ಮೇರೆಗೆ 6 ಮಂದಿಯ ವಿರುದ್ದ ಪೊಲೀಸ್ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿರುವ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಕಾಲೇಜಿನ ಪ್ರಾಂಶುಪಾಲರಿಗೆ ಜೀವಬೆದರಿಕೆ ಹಾಕಿದ ಆರೋಪದ ಮೇರೆಗೆ 6 ಮಂದಿಯ ವಿರುದ್ಧ ಪೊಲೀಸರು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋಮವಾರ ಪೀಪಲ್ಸ್ ಎಜುಕೇಶನ್ ಸೊಸೈಟಿ (PES)ಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಅಭಿಜಿತ್ ವಾಡೇಕರ್ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ವಿರುದ್ಧ ಬಿಎನ್‌ಎಸ್ ಸೆಕ್ಷನ್ 189 (2) (ಕಾನೂನುಬಾಹಿರ ಸಭೆ), 333 (ಅತಿಕ್ರಮಣ), 352 (ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ) ಮತ್ತು 351 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅಂತೆಯೇ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಪ್ರಾಂಶುಪಾಲರ ಸ್ಪಷ್ಟನೆ
ಇನ್ನು ಈ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪೀಪಲ್ಸ್ ಎಜುಕೇಶನ್ ಸೊಸೈಟಿ (PES)ಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಅಭಿಜಿತ್ ವಾಡೇಕರ್ ಅವರು, 'ಕಾಲೇಜು ಅಧಿಕಾರಿಗಳು ಅಂತಹ ಯಾವುದೇ ನಿಷೇಧ ಹೇರಿಲ್ಲ. ಕಾಲೇಜಿನಲ್ಲಿ ಹಿಜಾಬ್ ಗೆ ಅವಕಾಶವಿದೆ. ಪರೀಕ್ಷೆಯ ಸಮಯದಲ್ಲಿ ಮಾತ್ರ ನಿರ್ಬಂಧಗಳನ್ನು ವಿಧಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳುವಾಗ ತಮ್ಮ ಮುಖವನ್ನು ಕಾಣುವಂತೆ ಇಟ್ಟುಕೊಳ್ಳಬೇಕು ಎಂದರು.
ಪರೀಕ್ಷೆಗಳು ನಡೆಯುತ್ತಿರುವಾಗ ಮಧ್ಯಾಹ್ನ 1.45 ರ ಸುಮಾರಿಗೆ ಕಾಲೇಜಿಗೆ ಪ್ರವೇಶಿಸಿದ ಆರು ಪುರುಷರ ಗುಂಪು, "ನಮ್ಮ ಜನರಿಗೆ ಹಿಜಾಬ್ ಧರಿಸಲು ನೀವು ಏಕೆ ಅವಕಾಶ ನೀಡುತ್ತಿಲ್ಲ" ಎಂದು ಕೇಳಿದರು. ಬಳಿಕ ಮಾತಿನ ಚಕಮಕಿ ನಡೆಸಿ ಅವರು ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಮತ್ತು ಘೋಷಣೆಗಳನ್ನು ಕೂಗುತ್ತಾ ಬೆದರಿಕೆ ಹಾಕಿದರು ಎಂದರು.