ಕಿಶ್ತ್ವಾರ್ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್' ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅಡಗಿರುವ ಮೂವರು ಜೈಶ್ ಉಗ್ರರಿಗಾಗಿ ಗುರುವಾರ ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಬುಧವಾರ ರಾತ್ರಿ ಕುಚಲ್-ಚತ್ರೂ ಬೆಲ್ಟ್‌ನ ದಟ್ಟ ಅರಣ್ಯದಿಂದ ಕೂಡಿದ ಕಂಝಲ್ ಮಂಡು ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಎನ್ ಕೌಂಟರ್ ನಂತರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್‌ಗಳು ಮತ್ತು ಸ್ನಿಫರ್ ಡಾಗ್‌ಗಳೊಂದಿಗೆ ಹೆಚ್ಚುವರಿ ಪಡೆ ನಿಯೋಜನೆಯೊಂದಿಗೆ ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.
ಇಂದು ಬೆಳಗ್ಗೆ ಮುಂದುವರಿದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ. ಚತ್ರೂವಿನ ಕುಚಾಲ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ನಿನ್ನೆ ಸಂಜೆ 7-45ರ ಸುಮಾರಿಗೆ ಮಾಹಿತಿ ತಿಳಿದುಬಂದ ನಂತರ ಕಾರ್ಯಾಚರಣೆ ಆರಂಭಿಸಲಾಯಿತು. ಕೊನೆಯ ವರದಿಗಳು ಬಂದಾಗ ಗುಂಡಿನ ಚಕಮಕಿ ಮುಂದುವರೆದಿದೆ.
ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಉಗ್ರರನ್ನು ಹೊಡೆದುರುಳಿಸಲು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಲಾಗಿದೆ.
ಜಿಲ್ಲೆಯ ಬೆಟ್ಟಗಳಲ್ಲಿ ಪ್ರಮುಖ ಉಗ್ರರಾದ ಸೈಫುಲ್ಲಾ ಮತ್ತು ಆದಿಲ್ ಅಡಗಿರುವ ಮಾಹಿತಿ ಸಿಕ್ಕಿದೆ. ಕಳೆದೊಂದು ವಾರದಲ್ಲಿ ಜಮ್ಮು ಪ್ರದೇಶದಲ್ಲಿ ಎರಡನೇ ಬಾರಿಗೆ ನಡೆಯುತ್ತಿರುವ ಎನ್ ಕೌಂಟರ್ ಇದಾಗಿದೆ. ಜೂನ್ 26 ರಂದು ನಡೆದ ಎನ್ ಕೌಂಟರ್ ಲ್ಲಿ ಪಾಕಿಸ್ತಾನ ಮೂಲದ ಜೆಎಂ ಉಗ್ರನನ್ನು ಹೊಡೆದುರುಳಿಸಲಾಗಿತ್ತು.ಆತನ ಮೂವರು ಸಹಚರರು ತಪ್ಪಿಸಿಕೊಂಡಿದ್ದರು.