ಪುಣೆ: ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಜೈ ಗುಜರಾತ್ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.
ಡಿಸಿಎಂ ನೀಡಿದ ಹೇಳಿಕೆ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶುಕ್ರವಾರ ಸಮರ್ಥಿಸಿಕೊಂಡರು. ಜೈ ಹಿಂದ್, ಜೈ ಮಹಾರಾಷ್ಟ್ರ, ಜೈ ಗುಜರಾತ್, ಕೇಂದ್ರ ಸಚಿವ ಅಮಿತ್ ಶಾ ಹಾಜರಿದ್ದ ಕಾರ್ಯಕ್ರಮದಲ್ಲಿ ಶಿಂಧೆ ಹೇಳಿದರು.
"ಶಾ ಗುಜರಾತಿ ಭಾಷೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶಿಂಧೆ ಜೈ ಗುಜರಾತ್ ಎಂದು ಹೇಳಿದ ಮಾತ್ರಕ್ಕೆ, ಶಿಂಧೆ ಮಹಾರಾಷ್ಟ್ರಕ್ಕಿಂತ ಗುಜರಾತ್ ನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಅರ್ಥವಲ್ಲ" ಎಂದು ಫಡ್ನವೀಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ. "ಇಂತಹ ಸಂಕುಚಿತ ಚಿಂತನೆ ಮರಾಠಿಗಳಿಗೆ ಸಲ್ಲದು" ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಚಿಕ್ಕೋಡಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಿದಾಗ, ಮಾಜಿ ಕೇಂದ್ರ ಸಚಿವ ಶರದ್ ಪವಾರ್ 'ಜೈ ಮಹಾರಾಷ್ಟ್ರ, ಜೈ ಕರ್ನಾಟಕ' ಎಂದು ಹೇಳಿದ್ದರು ಎಂದು ಫಡ್ನವೀಸ್ ನೆನಪಿಸಿಕೊಂಡರು. "ಇದರ ಅರ್ಥ ಶರದ್ ಪವಾರ್ ಕರ್ನಾಟಕವನ್ನು ಹೆಚ್ಚು ಮತ್ತು ಮಹಾರಾಷ್ಟ್ರವನ್ನು ಕಡಿಮೆ ಪ್ರೀತಿಸುತ್ತಾರೆಯೇ" ಎಂದು ಫಡ್ನವೀಸ್ ಪ್ರಶ್ನಿಸಿದ್ದಾರೆ.